ಲ್ಯಾಪ್‍ಟಾಪ್ ಬಳಸಿಕೊಂಡು ಬದುಕು ರೂಪಿಸಿಕೊಳ್ಳಿ: ಎಸ್‌ಪಿಎಂ

ತುಮಕೂರು, ಜ. ೧೩- ವಿದ್ಯಾರ್ಥಿಗಳು ಸರ್ಕಾರ ವಿತರಿಸಿರುವ ಉಚಿತ ಲ್ಯಾಪ್‍ಟಾಪ್‍ಗಳನ್ನು ಸರಿಯಾಗಿ ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರಕ್ಕೆ ಇಸ್ರೋ, ಗುಬ್ಬಿ ತಾಲ್ಲೂಕಿನಲ್ಲಿ ಹೆಚ್‍ಎಎಲ್ ಹೆಲಿಕ್ಯಾಪ್ಟರ್ ನಿರ್ಮಾಣ ಕೈಗಾರಿಕೆ, ಇಂಡಸ್ಟ್ರಿಯಲ್ ಕಾರಿಡಾರ್, ಜಪಾನ್ ಟೆಕ್ ಪಾರ್ಕ್, ತುಮಕೂರು ರಾಯದುರ್ಗ ರೈಲ್ವೆ ಯೋಜನೆ, ಪಾವಗಡ ಸೋಲಾರ್ ಪಾರ್ಕ್ ಯೋಜನೆಗಳಿಂದ ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷ ಉದ್ಯೋಗ ಸೃಷ್ಠಿಯಾಗುತ್ತದೆ. ಆ ಮೂಲಕ ಈ ಭಾಗದ ಜನರ ಆರ್ಥಿಕ ಚಟುವಟಿಕೆಗಳು ಅಭಿವೃದ್ಧಿ ಹೊಂದಿ ಜೀವನ ಮಟ್ಟ ಸುಧಾರಣೆಯಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್. ರಫೀಕ್‌ಅಹಮದ್ ಮಾತನಾಡಿ, 2016-17ನೇ ಸಾಲಿನಲ್ಲಿ ಸರ್ಕಾರ 36.00 ಕೋಟಿ ರೂ. ವೆಚ್ಚದಲ್ಲಿ 25 ಸಾವಿರ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸಲಾಗಿದೆ. 2017-18ನೇ ಸಾಲಿನಲ್ಲಿ ಪ್ರಥಮ ವರ್ಷದ 1.5 ಲಕ್ಷ ಪದವಿಯ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ 237 ಕೋಟಿ ರೂ.ವೆಚ್ಚದಲ್ಲಿ ಉಚಿತ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದರು.

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಸರ್ಕಾರ ನೀಡಿರುವ ಲ್ಯಾಪ್‍ಟಾಪ್ ಬಳಕೆ ಮಾಡುವ ಮೂಲಕ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವ ಶಕ್ತಿ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತುಮಕೂರು ನಗರ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಮತ್ತು ವಿದ್ಯಾರ್ಥಿ ವೇತನವನ್ನು ಎಲ್ಲರಿಗೂ ತಲುಪಿಸುವಲ್ಲಿ ಕಾರ್ಯ ಪ್ರಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ನಿರ್ದೇಶಕರಾದ ಪ್ರೊ. ಎಸ್. ಮಲ್ಲೇಶ್ವರಪ್ಪ, ಜಂಟಿ ನಿರ್ದೇಶಕರಾದ ಪ್ರೊ. ರಮೇಶ್‍ಬಾಬು, ಪ್ರೊ. ಆರ್.ಕೆ. ಮೂಗೇಶಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಕೆ.ಎಸ್. ಜಗದೀಶ್ ವಹಿಸಿದ್ದರು. ಡಾ. ಜಿ. ತಿಪ್ಪೇಸ್ವಾಮಿ ಸ್ವಾಗತಿಸಿದರು. ಪ್ರೊ. ಎಂ.ಎನ್.ಎನ್. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ದೊಡ್ಡದುರುಗಪ್ಪ ವಂದಿಸಿದರು.

Leave a Comment