ಲೋಕ ಸಮರ: 2ನೇ ಹಂತಕ್ಕೆ ಅಖಾಡ ಸಜ್ಜು : ನಾಳೆ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ

ನವದೆಹಲಿ, ಏ. ೧೫- ವಿಶ್ವದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿರುವ ದೇಶದ ಲೋಕಸಭೆಗೆ ಇದೇ 11 ರಂದು ನಡೆದ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಹಲವೆಡೆ ಭಾರೀ ಹಿಂಸಾಚಾರ ನಡೆದು, ರಕ್ತಸಿಕ್ತವಾದ ಬೆನ್ನಲ್ಲೇ ಕರ್ನಾಟಕದ 14 ಸೇರಿದಂತೆ, 13 ರಾಜ್ಯಗಳ 97 ಲೋಕಸಭಾ ಕ್ಷೇತ್ರಗಳಿಗೆ ಇದೇ 18 ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ನಾಳೆ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ.

  • 13 ರಾಜ್ಯಗಳ 97 ಲೋಕಸಭಾ ಕ್ಷೇತ್ರಗಳಿಗೆ  ಇದೇ 18ಕ್ಕೆ ಮತದಾನ.
  • ಕರ್ನಾಟಕದ 14 ಕ್ಷೇತ್ರಗಳಿಗೂ ಈ ಹಂತದಲ್ಲಿ ಚುನಾವಣೆ.
  • ನಾಳೆ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ.
  • ಆ ನಂತರ ಮತದಾರರ ಮನೆಗಳಿಗೆ ಪ್ರದಕ್ಷಿಣೆ ಹಾಕಲು ಅವಕಾಶ.
  • ಸುಸೂತ್ರ ಚುನಾವಣೆಗೆ ಆಯೋಗದಿಂದ ಎಲ್ಲಾ ರೀತಿಯ ಕ್ರಮ.
  • ಮತಗಟ್ಟೆಗಳ ಸುತ್ತಮುತ್ತ ಪೊಲೀಸರ ಸರ್ಪಗಾವಲು.

18 ರಂದು ನಡೆಯಲಿರುವ ಮತದಾನ ಮುಕ್ತ, ನ್ಯಾಯಯುತ ಹಾಗೂ ನಿಸ್ಪಕ್ಷಪಾತವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮತಗಟ್ಟೆಗಳ ಸುತ್ತಮುತ್ತ ಸರ್ಪಗಾವಲು ನಿರ್ಮಿಸಲು ಉದ್ದೇಶಿಸಿದ್ದು, ಸ್ಥಳೀಯ ಪೊಲೀಸರ ಜೊತೆಗೆ ಕೆಲವೆಡೆ ಕೇಂದ್ರೀಯ ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲು ಮುಂದಾಗಿದೆ.

ಲೋಕಸಭೆಗೆ ನಡೆಯುತ್ತಿರುವ ಒಟ್ಟಾರೆ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದ್ದು, ಮತದಾರರ ಒಲವು ಗಳಿಸಲು ಕಾಂಗ್ರೆಸ್ – ಜೆಡಿಎಸ್, ಹಾಗೂ ಬಿಜೆಪಿ ನಾಯಕರು ಕೊನೆಗಳಿಗೆಯ ಕಸರತ್ತಿನಲ್ಲಿ ತೊಡಗಿದ್ದಾರೆ.

ಈ ಹಂತದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಹಾಸನ, ಮಂಡ್ಯ, ಕೊಡಗು -ಮೈಸೂರು, ಉಡುಪಿ – ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಇದರ ಜೊತೆಗೆ ತಮಿಳುನಾಡಿನ – 39, ಪುದುಚೆರಿಯ – 1, ಮಹಾರಾಷ್ಟ್ರದ – 10, ಉತ್ತರ ಪ್ರದೇಶದ – 8, ಅಸ್ಸಾಂ, ಬಿಹಾರ ಹಾಗೂ ಒಡಿಶಾದ ತಲಾ – 5, ಛತ್ತೀಸ್‌ಗಡ ಹಾಗೂ ಪಶ್ಚಿಮ ಬಂಗಾಳದ ತಲಾ – 3, ಜಮ್ಮು ಮತ್ತು ಕಾಶ್ಮೀರದ – 2,  ಮಣಿಪುರ ಹಾಗೂ ತ್ರಿಪುರಾದ ತಲಾ 1 ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ, ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ, ದೇಶವನ್ನು ಸುತ್ತುತ್ತಿದ್ದು, ಮತದಾರ ಪ್ರಭುಗಳ ಒಲವು ಗಿಟ್ಟಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ವಿಶೇಷವಾಗಿ ಕರ್ನಾಟಕದ 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದ ಚುನಾವಣೆ ದೇಶದ ಗಮನ ಸೆಳೆದಿದೆ. ಅಲ್ಲದೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಸ್ಪರ್ಧಿಸಿರುವ ತುಮಕೂರು ಕ್ಷೇತ್ರದ ಚುನಾವಣೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ.

ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ, ತಾರಾ ಪ್ರಚಾರಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ನಾಯ್ಡು ಆಗಮನ

ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಅವರೊಂದಿಗೆ ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್ ಭಾಗವಹಿಸುವ ನಿರೀಕ್ಷೆ ಇದೆ.

ಈ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದೇ 18 ರಂದು ನಡೆಯಲಿರುವ ಮತದಾನಕ್ಕೆ ಮುನ್ನ 48 ಗಂಟೆಗಳ ಅವಧಿಯಲ್ಲಿ ಅಂದರೆ, ನಾಳೆ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ಅಲ್ಲಿಂದಾಚೆಗೆ ಪ್ರಮುಖ ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು, ಮತದಾರರ ಮನೆಮನೆಗಳಿಗೆ ಎಡತಾಕಿ ಮತಯಾಚನೆ ಮಾಡಲಿದ್ದಾರೆ.

ಇದಾದ ನಂತರ, ಏಪ್ರಿಲ್ 23 ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಹಂತದಲ್ಲೂ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಚುನಾವಣೆ ನಡೆಯಲಿದೆ.

Leave a Comment