ಲೋಕಾಯುಕ್ತ ಆತಂರಿಕ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

ಮೈಸೂರು, ಮಾ.12- ಲೋಕಾಯುಕ್ತದಲ್ಲಿ ಆಂತರಿಕ ಭ್ರಷ್ಟಾಚಾರವನ್ನು ತೊಲಗಿಸಬೇಕೆಂದು ಆಗ್ರಹಿಸಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಮತ್ತು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ನ್ಯಾಯಾಲಯದ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಲೋಕಾಯುಕ್ತದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರನ್ನು ನೀಡುವ ವ್ಯಕ್ತಿ ಪ್ರಮಾಣಪೂರ್ವಕವಾಗಿ ಸತ್ಯವನ್ನೇ ಹೇಳುತ್ತಾ ದೂರು ನೀಡಿದರೂ ಅನ್ಯಾಯವನ್ನು ಕಂಡು ಹಿಡಿಯಬೇಕಾದ ಭ್ರಷ್ಟ ಸರ್ಕಾರಿ ಅಧಿಕಾರಿಗಳು ಹಣದ ಆಸೆಗೆ ದೂರುಗಳನ್ನೇ ಸುಳ್ಳು ಎಂದು ಮುಚ್ಚಿಹಾಕಿ ಆಂತರಿಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅದಕ್ಕೆ ನ್ಯಾಯಮೂರ್ತಿ ಭಾಸ್ಕರ್ ರಾವ್ ಉದಾಹರಣೆಯಾಗಿದ್ದಾರೆ. ಮೈಸೂರಿನ ಅರಮನೆ ಮಂಡಳಿಯಲ್ಲಿ ನಡೆದಿರುವ ಮೈಸೂರು ಅರಮನೆಯ ಹಗರಣಗಳು, ಅರಮನೆಯ ಸುತ್ತಲಿನ ಗೋಡೆ ಮೇಲೆ 1.50ಕೋರೂ ವ್ಯಯಮಾಡಿ ಅಳವಡಿಸಿರುವ ವಿದ್ಯುತ್ ಬೇಲಿ ಕೆಲಸದಲ್ಲಿ ನಡೆದಿರುವ ಅವ್ಯವಹಾರದ ದೂರು, ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಆಡೊಯೋ ಕಿಟ್ ಒದಗಿಸಲು ನಡೆದಿರುವ ಹಗರಣದಿಂದ ಮಂಡಳಿಯ ಬೊಕ್ಕಸಕ್ಕೆ ಆಗಿರುವ ನಷ್ಟದ ದೂರು, ಅರಮನೆ ವಾಹನ ನಿಲ್ದಾಣ ಟೆಂಡರ್ ಕರೆಯದೇ ವಾಹನ ನಿಲುಗಡೆ ಶುಲ್ಕ ವಸೂಲಾತಿ, ಅರಮನೆ ಖಾಸಗಿ ದರ್ಬಾರ್ ಹಾಲ್ ಕಂಬಗಳಿಗೆ ಚಿನ್ನದ ಬಣ್ಣ ಬಳಿದ ಕುರಿತ ಹಗರಣ ಕುರಿತಂತೆ ದೂರು ದಾಖಲಿಸಿದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಐದು ವರ್ಷ ಕಳೆದಿದ್ದರೂ ಪ್ರಕರಣ ಮುಚ್ಚಿ ಹಾಕಲಾಗಿದೆ. ಅದಕ್ಕಾಗಿ ಲೋಕಾಯುಕ್ತದಲ್ಲಿ ಆಂತರಿಕ ಭ್ರಷ್ಟಾಚಾರವನ್ನು ತೊಲಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಸಂಚಾಲಕ ರಾಜೇಶ್ ಗಡಿ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅರವಿಂದ ಶರ್ಮಾ, ಪ್ರಧಾನ ಕಾರ್ಯದರ್ಶಿ ಬಿ.ವಿ.ಗಧಾದರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Comment