ಲೋಕಸಭೆಯ ಬಾವಿಯಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ : ಸ್ಪೀಕರ್‌ ಖಡಕ್‌ ಎಚ್ಚರಿಕೆ

ನವದೆಹಲಿ : ಲೋಕಸಭಾ ಕಲಾಪದ ವೇಳೆ ಇಂದಿನಿಂದ ಯಾರೂ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಂತಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದು ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ರೈತರ ಸಮಸ್ಯೆ, ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಭಾಧ್ಯಕ್ಷರ ಪೀಠದ ಮುಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ, ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್, ಡಿಎಂಕೆ, ಟಿಎಂಸಿ ಹಾಗೂ ಪ್ರತಿಪಕ್ಷಗಳ ಸದಸ್ಯರಿಗೆ ಸದನದ ಬಾವಿಗೆ ಇಳಿಯಬೇಡಿ. ಇಳಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಅತ್ತ ಶೂನ್ಯವೇಳೆಯಲ್ಲಿ, ಕಾಂಗ್ರೆಸ್ ಸಭಾ ನಾಯಕ ಅಧಿರ್ ರಂಜನ್ ಚೌಧರಿ ಅವರು, ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ವಾಪಸ್‍ ಪಡೆಯುವ ವಿಷಯ ಪ್ರಸ್ತಾಪಿಸಿ ‘ಎಸ್‌ಪಿಜಿ ರಕ್ಷಣೆ, ಸಾಮಾನ್ಯ ರಕ್ಷಣೆಯಲ್ಲ.’ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು. ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಹಿಂಪಡೆಯಲು ಕಾರಣವಾದರೂ ಏನು? ಏಕಾಏಕಿ ವಾಪಸ್‍ ಪಡೆಯುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು. ಡಿಎಂಕೆ ಸದಸ್ಯ ಟಿ ಆರ್ ಬಾಲು ಸಹ ಇದೇ ವಿಚಾರ ಪ್ರಸ್ತಾಪಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ, ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಸಭಾತ್ಯಾಗ ನಡೆಸಿದರು.

ಇನ್ನು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್, ಡಿಎಂಕೆ, ನ್ಯಾಶನಲ್ ಕಾನ್ಫರೆನ್ಸ್ ನ ಸದಸ್ಯರು, ಕೇಂದ್ರದ ವಿರುದ್ಧ ಕಿಡಿಕಾರಿ, ಪ್ರತಿಪಕ್ಷಗಳ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸಿ, ಸರ್ವಾಧಿಕಾರ ಅಂತ್ಯಗೊಳಿಸಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು…

Leave a Comment