ಲೋಕಸಭಾ ಚುನಾವಣೆ: ಸಾಮಾನ್ಯ ವೀಕ್ಷಕರು,ಪೊಲೀಸ್ ವೀಕ್ಷಕರಿಂದ ಸಭೆ ಕಾಂಚಾಣ ಕುಣಿತಕ್ಕೆ ಹಾಕಿ ಲಗಾಮು

ಬಳ್ಳಾರಿ,ಏ.07: ಬಳ್ಳಾರಿ ಲೋಕಸಭಾ ಚುನಾವಣಾ ಕ್ಷೇತ್ರ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಮುಕ್ತ,ಪಾರದರ್ಶಕ ಹಾಗೂ ಅತ್ಯಂತ ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ಚುನಾವಣಾ ಆಯೋಗದಿಂದ ನಿಯೋಜಿತರಾಗಿ ಆಗಮಿಸಿದ ಸಾಮಾನ್ಯ ವೀಕ್ಷಕರಾದ ಶಿಯೋ ಶೇಖರ್ ಶುಕ್ಲಾ, ಅಶುತೋಷ ಅವಸ್ತಿ ಹಾಗೂ ಪೊಲೀಸ್ ವೀಕ್ಷಕರಾದ ಎಸ್.ಎಂ.ನರ್ವನೆ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಚುನಾವಣೆಗೆ ನಿಯೋಜಿತರಾದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು.ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸದಿರಿ ಎಂದರು.

ಈ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಕಾಂಚಾಣ ಕುಣಿತ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು. ಪಕ್ಕದ ಆಂಧ್ರಪ್ರದೇಶದಿಂದ ಅಕ್ರಮ ಮದ್ಯ ಮತ್ತು ಹಣ ಹರಿದು ಬರುವ ಸಾಧ್ಯತೆ ಇದ್ದು ವಿಶೇಷ ನೀಗಾವಹಿಸಿ ಮತ್ತು ಕೋಮುಗಲಭೆ ಆದ ಕಡೆ ವಿಶೇಷ ಒತ್ತು ಕೊಡಿ ಎಂದು ಅವರು ಸೂಚಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಅವರು ಕಾಂಚಾಣದ ಸದ್ದು ಈ ಚುನಾವಣೆಯಲ್ಲಿ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವೀಚಕ್ಷಣಾ ದಳ ಸೇರಿದಂತೆ ವಿವಿಧ ತಂಡಗಳನ್ನು ನೇಮಿಸಿ ಅಗತ್ಯ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ ಎಂದರು.

2408 ಮತಗಟ್ಟೆಗಳಲ್ಲಿ ಅಗತ್ಯ ಸೌಕರ್ಯ: ಹರಪನಳ್ಳಿ ತಾಲೂಕು ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 2408 ಮತಗಟ್ಟೆಗಳು(ಬಳ್ಳಾರಿ ಕ್ಷೇತ್ರ-1925, ಕೊಪ್ಪಳ ಕ್ಷೇತ್ರದ ವ್ಯಾಪ್ತಿಯ ಸಿರಗುಪ್ಪ-226, ದಾವಣಗೆರೆ ಕ್ಷೇತ್ರದ ವ್ಯಾಪ್ತಿಯ ಹರಪನಳ್ಳಿ-257) ಸ್ಥಾಪಿಸಲಾಗಿದ್ದು, ಎಲ್ಲ ಮತಗಟ್ಟೆಗಳಲ್ಲಿ ವಿಕಲಚೇತನರ ಅನುಕೂಲಕ್ಕಾಗಿ ರ್ಯಾಂಪ್ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್, ನೆರಳು ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ವಿಕಲಚೇತನರಿಗೆ ಮತಗಟ್ಟೆಗೆ ಕರೆತರುವ ನಿಟ್ಟಿನಲ್ಲಿ ಕಳೆದ ಲೋಕಸಭಾ ಉಪಚುನಾವಣೆಯ ಸಂದರ್ಭದಲ್ಲಿ ವಾಹನದ ವ್ಯವಸ್ಥೆ ಮಾಡಿದಂತೆ ಈ ಬಾರಿಯೂ ಮಾಡಲಾಗುತ್ತಿದೆ ಎಂದರು.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಳ್ಳಾರಿ ನಗರ-5 ಮತ್ತು ವಿಜಯನಗರ-5 ಸೇರಿದಂತೆ 17 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ವೀಕ್ಷಕರಿಗೆ ಮಾಹಿತಿ ನೀಡಿದರು.

ಮತಯಂತ್ರಗಳು ಸಮರ್ಪಕ ಸಂಗ್ರಹ: ಕ್ಷೇತ್ರದ ಚುನಾವಣೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಅಂದರೇ ಶೇ.120ರಷ್ಟು ಮತಯಂತ್ರಗಳನ್ನು ಸಂಗ್ರಹಿಸಿಡಲಾಗಿದೆ.

ವಿವಿಪ್ಯಾಟ್ ಪ್ರಾತ್ಯಕ್ಷಿಕ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಏರ್ಪಡಿ ಮತದಾರರಿಗೆ ಅರಿವು ಮೂಡಿಸಲಾಗುತ್ತಿದೆ. ಚುನಾವಣಾ ಕಾರ್ಯದಲ್ಲಿ ಭಾಗಿಯಾದ ಎಲ್ಲ ಹಂತದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ವಿವರಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, ಈ ಬಾರಿಯ ಚುನಾವಣಾ ಕಾರ್ಯಕ್ಕೆ ಶೇ.15ರಷ್ಟು ಜನರು ಮೀಸಲು ಸೇರಿದಂತೆ ಒಟ್ಟು 11077 ಜನರು ನಿಯೋಜಿಸಲಾಗುತ್ತಿದೆ ಎಂದರು.

ಮೈಕ್ರೋ ಅಬ್ಸವರ್ಸ್‍ಗಳು ಅಗತ್ಯತೆ ನಮಗೆ 430 ಇದ್ದು,ನಮ್ಮಲ್ಲಿ 670 ಜನರಿದ್ದಾರೆ ಎಂದರು.

ಸಿ-ವಿಜಿಲ್ ಆ್ಯಪ್ ಕುರಿತು ಜಿಲ್ಲೆಯಾದ್ಯಂತ ಜಾಗೃತಿ: ಚುನಾವಣಾ ಅಕ್ರಮಗಳು ಕಂಡಲ್ಲಿ ಚಿತ್ರೀಕರಿಸಿ ಸಾರ್ವಜನಿಕರೇ ದೂರು ನೀಡುವ ವಿಶಿಷ್ಟ ಸಿ-ವಿಜಿಲ್ ಆ್ಯಪ್‍ನ್ನು ಈ ಬಾರಿ ಚುನಾವಣಾ ಆಯೋಗ ಪರಿಚಯಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲೆಯಾದ್ಯಂತ ಹೋರ್ಡಿಂಗ್ಸ್‍ಗಳನ್ನು ಹಾಕಲಾಗಿದೆ. ಮಾಧ್ಯಮಗಳಿಗೆ ವಿಶೇಷ ಲೇಖನ ಬಿಡುಗಡೆ ಮಾಡಲಾಗಿದೆ, ಇದರಡಿ ಇದುವರೆಗೆ 40 ಪ್ರಕರಣಗಳು ದಾಖಲಾಗಿವೆ. ಅನುಮತಿ ಕೋರಿ ಸುವಿಧಾ ಅಡಿ ಬಂದ 38 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರಾಮ್ ಪ್ರಸಾತ್ ಅವರು ಸಾಮಾನ್ಯ ವೀಕ್ಷಕರಿಗೆ ವಿವರಿಸಿದರು.

ಕಂಟ್ರೋಲ್ ಮಾನಿಟರಿಂಗ್‍ಗೆ ಬರುವ ದೂರುಗಳನ್ನು ನಿಗದಿಪಡಿಸಿದ ಅವಧಿಯೊಳಗೆ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
236 ಭಯಗ್ರಸ್ತ ಮತಗಟ್ಟೆ ಪ್ರದೇಶಗಳಿಗೆ ಅಗತ್ಯ ಭದ್ರತೆ: ಜಿಲ್ಲೆಯ ಒಟ್ಟು 2408 ಮತಗಟ್ಟೆಗಳಲ್ಲಿ 236 ಭಯಗ್ರಸ್ತ ಮತಗಟ್ಟೆ ಪ್ರದೇಶಗಳೆಂದು ಗುರುತಿಸಲಾಗಿದ್ದು, ಆ ಸ್ಥಳಗಳಲ್ಲಿ 4965 ಮತದಾರರಿದ್ದಾರೆ. ಈಗಾಗಲೇ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆ ಭಯಗ್ರಸ್ಥ ಮತಗಟ್ಟೆ ವ್ಯಾಪ್ತಿಯ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ “ನಾವಿದ್ದೇವೆ ಚಿಂತೆ ಬೇಡ; ಧೈರ್ಯದಿಂದ ಬಂದು ಮತದಾನ ಮಾಡಿ ಅಂತ’’ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ವಿವರಿಸಿದರು.

ಈ ಪ್ರದೇಶಗಳಲ್ಲಿ ಭಯಹುಟ್ಟಿಸುತ್ತಿದ್ದ 492 ವ್ಯಕ್ತಿಗಳನ್ನು ಗುರುತಿಸಿ; ಈ ಚುನಾವಣೆಯಲ್ಲಿ ಏನಾದರೂ ಅಹಿತಕರ ಘಟನೆ ಮಾಡಿದರೇ ಪರಿಣಾಮ ನೆಟ್ಟಗಿರಲ್ಲ ಅಂತ ಎಚ್ಚರಿಕೆ ನೀಡುವುದರ ಜತೆಗೆ ಅವರಿಂದ ಬಾಂಡ್ ಬರೆಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಕ್ಷೇತ್ರದಲ್ಲಿ 3 ವಿಧಾನಸಭಾ ಕ್ಷೇತ್ರಗಳನ್ನು ಅತ್ಯಂತ ಸೂಕ್ಷ್ಮವೆಂದು ಗುರುತಿಸಲಾಗಿದ್ದು, ಆ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅಸ್ಪದ ಕೊಡದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

541 ಕ್ರಿಟಿಕಲ್ ಪೊಲೀಂಗ್ ಸ್ಟೇಶನ್‍ಗಳು ಕ್ಷೇತ್ರದಲ್ಲಿವೆ ಎಂದರು.

ಆರ್‍ವೈಎಂಇಸಿ ಕಾಲೇಜಿನಲ್ಲಿ ಮತಎಣಿಕೆ: ಜಿಲ್ಲಾಕೇಂದ್ರದಲ್ಲಿರುವ ಆರ್‍ವೈಎಂಇಸಿ ಕಾಲೇಜಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಅಲ್ಲಿಯೇ ಮಾಡಲಾಗುತ್ತಿದ್ದು, ಮತ ಏಣಿಕೆಗೆ ಸಂಬಂಧಿಸಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಏ.8ರಿಂದ ಆರಂಭವಾಗಿ ಏ.20ರೊಳಗೆ ಮುಗಿಯಲಿದೆ ಎಂದು ಜಿಲ್ಲಾಚುನಾವಣಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ಕೆ.ನಿತೀಶ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಪ್ರೋಬೆಷನರಿ ಐಎಎಸ್ ಅಧಿಕಾರಿ ನಂದಿನಿ ಸೇರಿದಂತೆ ವಿವಿಧ ಕೋಶಗಳ ನೋಡಲ್ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇದ್ದರು.

Leave a Comment