ಲೋಕಸಭಾ ಚುನಾವಣೆಗೆ ಸ್ಪರ್ಧೆ

ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ನಿಖಿಲ್
ಮಂಡ್ಯ: ಜ.12- ಈಗಾಗಲೇ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಸಾಕಷ್ಟು ತಯಾರಿ ನಡೆಯುತ್ತಿದ್ದು, ನಟ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಸ್ಪರ್ಧೆ ಮಾಡುವ ಆಸೆ ಬಗ್ಗೆ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಗುಟ್ಟು ಬಿಚ್ಚಿಟ್ಟಿದ್ದಾರೆ.
ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನನ್ನ ಅಭಿನಯದ ‘ಸೀತಾರಾಮ ಕಲ್ಯಾಣ’ ಇದೇ ಜನವರಿ 25 ರಂದು ರಿಲೀಸ್ ಆಗಲಿದೆ. ಹೀಗಾಗಿ ಪ್ರಮೋಷನ್‍ಗೆ ಬಂದಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳು ಭೇಟಿ ಮಾಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದಾರೆ. ಈ ಬಗ್ಗೆ ವರಿಷ್ಠರು, ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ತೀರ್ಮಾನ ಮಾಡಬೇಕು. ಇದು ನನ್ನ ತೀರ್ಮಾನ ಅಲ್ಲ. ನನ್ನ ಪಕ್ಷದ ತೀರ್ಮಾನವಾಗುತ್ತದೆ. ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಅವರು ಸ್ಫೂರ್ತಿ. ರಾಜಕೀಯಕ್ಕೆ ಬರುವ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ವರಿಷ್ಠರು ನಿರ್ಧರಿಸುತ್ತಾರೆ. ರಾಜಕೀಯಕ್ಕೆ ಬಂದರೆ ಚಿತ್ರರಂಗ, ರಾಜಕೀಯ ಎರಡರಲ್ಲೂ ಇರುತ್ತೇನೆ. ಮುಖ್ಯಮಂತ್ರಿ ಮಗನಾಗಿ ನನಗೆ ಜವಬ್ದಾರಿ ಇದೆ. ಸಮ್ಮಿಶ್ರ ಸರ್ಕಾರ 5 ವರ್ಷ ಇರುತ್ತದೆ. ಜನರಿಗಾಗಿ ಸರ್ಕಾರ ಇರಬೇಕು. ನಮ್ಮ ತಂದೆ ಭಾವನಾ ಜೀವಿ. ಸಮ್ಮಿಶ್ರ ಸರ್ಕಾರ ಬಂದಾಗ ಬಹುಮತ ಬಂದಿಲ್ಲ ಎಂದು ಸಾಲಮನ್ನಾ ವಿಚಾರವಾಗಿ ಎಸ್ಕೇಪ್ ಆಗಬಹುದಿತ್ತು. ಆದರೆ ಸರ್ಕಾರದ ಖಜಾನೆ ಬಗ್ಗೆ ಅವರಿಗೆ ಅರಿವಿದೆ. ಇವೆಲ್ಲದರ ನಡುವೆ ರೈತರ ಸಾಲಮನ್ನಾ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅಷ್ಟೇ ಅಲ್ಲದೇ ಅಭಿವೃದ್ಧಿ ಕಾರ್ಯದ ಜೊತೆಗೆ ಸಾಲಮನ್ನಾಕ್ಕೆ ಹೋರಾಟ ಮಾಡುತ್ತಿದ್ದಾರೆ. ನಮ್ಮ ಬ್ಯಾಂಕ್ ಅಕೌಂಟ್ ಬಗ್ಗೆ ನಮಗೆ ಗೊತ್ತಿರುತ್ತದೆ. ನಾವು ಸಾಲ ಮಾಡಿಕೊಂಡಿರುತ್ತೇವೆ. ನಮ್ಮ ಸಾಲದ ಬಗ್ಗೆ ನಮಗೆ ಹೇಗೆ ಅರಿವಿರುತ್ತದೆಯೋ, ಹಾಗೇ ಮುಖ್ಯಮಂತ್ರಿಗಳಿಗೂ ಖಜಾನೆ ಬಗ್ಗೆ ಅರಿವಿದೆ. ರೈತರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ನಾನು ರಾಜಕೀಯವಾಗಿ ರಾಜ್ಯಾದ್ಯಂತ ಓಡಾಡುತ್ತೇನೆ. ಕೊನೆಯವರೆಗೂ ರಾಜ್ಯದಲ್ಲಿ ಪಕ್ಷ ಕಟ್ಟಲು ನಾನು ಕೆಲಸ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನು ಗೌರವಿಸುತ್ತೇನೆ ಎಂದು ನಿಖಿಲ್ ತಿಳಿಸಿದ್ದಾರೆ.

Leave a Comment