ಲೋಕಸಭಾ ಚುನಾವಣೆಗೆ ಜಿಲ್ಲಾ ಕಾಂಗ್ರೆಸ್ ಸಜ್ಜು

ಎಸ್.ಎಸ್.ಎಂ.ಸ್ಪರ್ಧೆಗೆ ಒತ್ತಾಯ-ಮನವಿ
ದಾವಣಗೆರೆ. ಫೆ. 12: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳುತ್ತಿದೆ. ತಳಮಟ್ಟದಿದ ಪಕ್ಷದ ಸಂಘಟನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಅಭ್ಯರ್ಥಿಯಾಗಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರು ಪಟ್ಟು ಹಿಡಿದಿದ್ದು ಅದಕ್ಕಾಗಿ ನಗರದ ರೇಣುಕಾಮಂದಿರದಲ್ಲಿಂದು ಸಭೆ ನಡೆಸಿ ನಂತರ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಮೆರವಣಿಗೆ ಮೂಲಕ ತೆರಳಿ ಒತ್ತಾಯಿಸಿದ್ದಾರೆ.
ದಾವಣಗೆರೆ ಅಭಿವೃದ್ದಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಪಾರ ಶ್ರಮವಿದೆ. ಅಲ್ಲದೆ ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಕಾಂಗ್ರೆಸ್ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಲಾಗುವುದು. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರವಹಿಸಲಾಗುವುದು. ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಅತ್ಯಂತ ಸಮರ್ಥವಾಗಿ ಚುನಾವಣೆ ಎದುರಿಸಲಾಗುವುದು.ಜಿಲ್ಲೆಯಾದ್ಯಂತ ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಜಿ.ಶಿವಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಉಪಮೇಯರ್ ಚಮನ್ ಸಾಬ್, ಪಾಲಿಕೆ ಸದಸ್ಯರುಗಳಾದ ಎಂ.ಹಾಲೇಶ್, ಲಿಂಗರಾಜ್, ಜಿ.ಪಂ ಸದಸ್ಯ ಬಸವಂತಪ್ಪ, ಬಿ.ಹೆಚ್.ವೀರಭದ್ರಪ್ಪ, ಕಿರುವಾಡಿ ಸೋಮಶೇಖರ್, ರಾಮಣ್ಣ, ದೊಗ್ಗಳ್ಳಿ ಬಸವರಾಜ್, ಮುದೇಗೌಡ್ರು ಗಿರೀಶ್, ಎಸ್.ಮಲ್ಲಿಕಾರ್ಜುನ್, ನಾಗರಾಜ್ ಸೇರಿದಂತೆ ಕಾರ್ಯಕರ್ತರು, ಮುಖಂಡರು ಇದ್ದರು.

Leave a Comment