ಲೋಕಸಭಾ ಕ್ಷೇತ್ರದ ಚುನಾವಣೆ : ಮೈಸೂರು ಜಿಲ್ಲಾಡಳಿತ ಸಜ್ಜು

ನಾಳೆ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
ಮೈಸೂರು. ಏ.15: ಗುರುವಾರ ಅಂದರೆ ಏ.18ರಂದು 21-ಮೈಸೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.
ಈ ಕುರಿತು ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ಮಡಿಕೇರಿಯಲ್ಲಿ 2,21,359, ವಿರಾಜಪೇಟೆಯಲ್ಲಿ 2,19,682, ಪಿರಿಯಾಪಟ್ಟಣದಲ್ಲಿ 1,83,717, ಹುಣಸೂರಿನಲ್ಲಿ 2,26,960, ಚಾಮುಂಡೇಶ್ವರಿಯಲ್ಲಿ 3,02,823, ಕೃಷ್ಣರಾಜದಲ್ಲಿ 2,43,736, ಚಾಮರಾಜದಲ್ಲಿ 2,33,331, ನರಸಿಂಹರಾಜದಲ್ಲಿ 2,63,448, ಒಟ್ಟು 18,95,056 ಮತದಾರರಿದ್ದಾರೆ ಎಂದರು. 2,187 ಮತಗಟ್ಟೆಗಳಿಗೆ ಒಟ್ಟು 2,406 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2,406 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 4,812 ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯಕ್ಷಾಧಿಕಾರಿ, ಒಬ್ಬರು ಸಹಾಯಕ ಅಧ್ಯಕ್ಷಾದಿಕಾರಿ ಮತ್ತು ಇಬ್ಬರು ಮತದಾನಾಧಿಕಾರಿಗಳನ್ನು ನೇಮಿಸಲಾಗಿದೆ. ಇದರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ಮತದಾನಾಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರದಿಂದ ನಿಯೋಜಿಸಲ್ಪಟ್ಟಲ್ಲಿ ಆ ವಿಧಾನಸಭಾ ಕ್ಷೇತ್ರಗಳಿಗೆ ತಲುಪಲು ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಮಸ್ಟರಿಂಗ್ ಕೇಂದ್ರಗಳಿಗೆ 17-04-2019ರ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದೆ ಎಂದರು. ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಅಧಿಕಾರಿಗಳನ್ನು ಮತಗಟ್ಟೆಗಳಿಗೆ ತಲುಪಿಸಲು ಒಟ್ಟು 405 ಕೆಎಸ್ ಆರ್ ಟಿಸಿ ಬಸ್, 114 ಜೀಪ್, 95ಮಿನಿ ಬಸ್ ಗಳನ್ನು ಉಪಯೋಗಿಸಲಾಗುತ್ತಿದೆ. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರು ಜಿಲ್ಲೆಯ 6ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿವಿಧಾನಸಭಾ ಕ್ಷೇತ್ರಕ್ಕೆ 2ರಂತೆ ಒಟ್ಟು 12 ಸಖಿ ಮತಗಟ್ಟೆಗಳನ್ನು ಮತ್ತು ಮಡಿಕೇರಿ ಜಿಲ್ಲೆಯ 2ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿವಿಧಾನಸಭಾ ಕ್ಷೇತ್ರಕ್ಕೆ 5ರಂತೆ 10ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 11 ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 7ದಿವ್ಯಾಂಗ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ 24ಪ್ರಕರಣಗಳಲ್ಲಿ ಎಫ್ ಐ ಆರ್ ದಾಖಲಾಗಿದೆ. ಒಟ್ಟು 43,97,120ನಗದು, 33,810,435ಲೀ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಪ್ರಚಾರ ಸಾಮಗ್ರಿ ಇತರೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಅಂದಾಜು ಬೆಲೆ 6,86,300 ರೂ.ಆಗಿದೆ ಎಂದರು. ನಾಳೆ ಸಂಜೆ 6 ಗಂಟೆಯೊಳಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿ.ಪಂ ಸಿಇಓ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಅನುರಾಧ, ಮನಪಾ ಆಯುಕ್ತೆ ಶಿಲ್ಪನಾಗ್ ಮತ್ತಿತರರು ಇದ್ದರು.

Leave a Comment