ಲೈಂಗಿಕ ದೌರ್ಜನ್ಯ ದೂರು: ಹಿಂಪಡೆಯದ ಯುವತಿಯ ಜಜ್ಜಿ ಕೊಲೆ

ಸಿಯೋನಿ (ಮಧ್ಯಪ್ರದೇಶ),ಆ.೨೧- ತನ್ನ ವಿರುದ್ಧ ನೀಡಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂಪಡೆಯದ ದಲಿತ ಯುವತಿಯನ್ನು ನಡುರಸ್ತ್ತೆಯಲ್ಲೇ ಜುಟ್ಟು ಹಿಡಿದು ಎಳೆದು, ಕಲ್ಲಿನಿಂದ ಮನಸೋ ಇಚ್ಛೆ ಥಳಿಸಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ನೆತಾಜಿ ಸುಭಾಷ್ ಚಂದ್ರಬೋಸ್ ಸರ್ಕಾರಿ ಕಾಲೇಜಿನ ೨೩ ವರ್ಷದ ವಿದ್ಯಾರ್ಥಿನಿ ಹತ್ಯೆಯಾದ ದಲಿತ ಯುವತಿ ಎಂದು ಪೊಲೀಸರು ತಿಳಿಸಿದ್ದಾರೆ.

೩೮ ವರ್ಷದ ಆರೋಪಿ ಅನಿಲ್ ಮಿಶ್ರಾ ಯುವತಿಗರೆ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಹಿಂಪಡೆಯುವಂತೆ ಮಿಶ್ರಾ ಹಲವು ದಿನಗಳಿಂದ ಯುವತಿಗೆ ಪೀಡಿಸುತಿದ್ದ, ಇದಕ್ಕೆ ಯುವತಿ ಸಮ್ಮತಿಸಿರಲಿಲ್ಲ.

ಸೋಮವಾರ ಯುವತಿ ಕಾಲೇಜಿಗೆ ಹೋಗುವಾಗ ಮಾರ್ಗ ಮಧ್ಯೆ ಬೈಕ್‌ನಲ್ಲಿ ಅಡ್ಡಗಟ್ಟಿದ ಆರೋಪಿ ಆಕೆಯ ಜಡೆ ಹಿಡಿದು ಎಳೆದಾಡಿದ್ದಾನೆ. ನಂತರ ಆಕೆಯನ್ನು ನೆಲಕ್ಕೆ ಉರುಳಿಸಿ ಕಲ್ಲಿನಿಂದ ಆಕೆಯ ತಲೆಯನ್ನು ಚಚ್ಚಿದ್ದಾನೆ ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ರವಾನಿಸುವ ಪ್ರಯತ್ನ ನಡೆಸಿದರೂ, ಮಾರ್ಗ ಮಧ್ಯೆಯೇ ಯುವತಿ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿ ಮಿಶ್ರಾನನ್ನು ಬಂಧಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Leave a Comment