ಲೈಂಗಿಕ ತುಣುಕಿನ ವಿಡಿಯೋ ಷಡ್ಯಂತ್ರ: ಲಿಂಬಾವಳಿ ಸ್ಪಷ್ಟನೆ

ಬೆಂಗಳೂರು, ಜು. ೨೨- ತಮ್ಮ ವಿರುದ್ಧ ಸರ್ಕಾರ ಕುತಂತ್ರ ನಡೆಸಿದೆ. ಈ ಕುತಂತ್ರದಲ್ಲಿ ತಮ್ಮ ಪಕ್ಷದ ಕೆಲ ನಾಯಕರು ಇದ್ದಾರೆ. ನಾನು ಎಲ್ಲವನ್ನು ಎದುರಿಸುತ್ತೇನೆ. ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
ತಮ್ಮ ಬಗೆಗಿನ ಲೈಂಗಿಕ ತುಣುಕಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ಷಡ್ಯಂತ್ರ. ಸರ್ಕಾರದವರೇ ಈ ಕುತಂತ್ರ ನಡೆಸಿದ್ದಾರೆ. ತಮ್ಮ ಪಕ್ಷದ ಒಂದಿಬ್ಬರು ನಾಯಕರು ಇದರಲ್ಲಿ ಕೈಜೋಡಿಸಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಎಲ್ಲವೂ ನನಗೆ ಗೊತ್ತಿದೆ, ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ಕಳೆದ ಐದಾರು ತಿಂಗಳಿನಿಂದ ಪಕ್ಷ ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಹಾಗಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಅವರು ದೂರಿದರು.
ಆಡಳಿತ ಪಕ್ಷದ ಸಚಿವರೊಬ್ಬರು ನನಗೆ ಕರೆ ಮಾಡಿ ನಮಗೆ ಸಹಕರಿಸಿ, ನಿಮಗೂ ನಾವು ಸಹಕರಿಸುತ್ತೇವೆ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ದೊಡ್ಡಮಟ್ಟದ ಷಡ್ಯಂತ್ರ ನಡೆದಿದೆ ಎಂದು ಅವರು ಹೇಳಿದರು.
ಆಡಳಿತ ಪಕ್ಷದವರು ಎಲ್ಲ ವಾಮಮಾರ್ಗ ಬಿಟ್ಟು ವಿಶ್ವಾಸ ಮತಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

Leave a Comment