ಬರದಲ್ಲೂ ವಿದ್ಯುತ್ ಬರೆ : ಪ್ರತಿ ಯುನಿಟ್‌ಗೆ 25 ರಿಂದ 50 ಪೈಸೆ ಏರಿಕೆ

ಬೆಂಗಳೂರು, ಏ. ೧೧- ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಪಿ) ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಪ್ರತಿ ಯೂನಿಟ್‌ಗೆ ಸರಾಸರಿ 25 ಪೈಸೆಯಿಂದ 50 ಪೈಸೆಯವರೆಗೆ ಏರಿಕೆ ಮಾಡಿ ಆದೇಶಿಸಿದೆ. ಹೊಸದರ ಏ. 1 ರಿಂದಲೇ ಅನ್ವಯವಾಗಲಿದೆ.

ನಗರ ಪ್ರದೇಶಗಳಲ್ಲಿನ ಗೃಹ ಬಳಕೆಯ ಗ್ರಾಹಕರಿಗೆ 25 ಪೈಸೆಯಿಂದ 40 ಪೈಸೆಯವರೆಗೆ ಹಾಗೂ ಬೆಂಗಳೂರು ನಗರ ಬಳಕೆದಾರರಿಗೆ 40 ರಿಂದ 50 ಪೈಸೆ, ಗ್ರಾಮಾಂತರ ಪ್ರದೇಶದಲ್ಲಿ 25 ಪೈಸೆಯಿಂದ 35 ಪೈಸೆವರೆಗೂ ಪ್ರತಿ ಯೂನಿಟ್ ದರವನ್ನು ಏರಿಕೆ ಮಾ‌ಡಲಾಗಿದೆ.
ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಪ್ರಕಟಿಸಿದ ಕೆಇಆರ್‌ಸಿ ಅಧ್ಯಕ್ಷ ಎಂಕೆ. ಶಂಕರ ಲಿಂಗೇಗೌಡ ರಾಜ್ಯದ 5 ವಿದ್ಯುತ್ ಕಂಪನಿಗಳು ನಷ್ಟದಲ್ಲಿದ್ದು, ಪ್ರತಿ ಯೂನಿಟ್‌ಗೆ 1.48 ಪೈಸೆ ಹೆಚ್ಚಳ ಮಾಡುವಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.
ಕಂಪನಿಗಳ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸರಾಸರಿ 48 ಪೈಸೆವರೆಗೂ ಏರಿಕೆ ಮಾಡಲು ವಿದ್ಯುತ್ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
1 ಲಕ್ಷ ಯೂನಿಟ್‌ಗಿಂತಲೂ ಹೆಚ್ಚು ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ 10 ಪೈಸೆಯಿಂದ 20 ಪೈಸೆವರೆಗೆ ಪ್ರತಿ ಯೂನಿಟ್‌ಗೆ ಹೆಚ್ಚಳ ಮಾಡಿದ್ದು, ವಿದ್ಯುತ್ ಕಂಪನಿಗಳಿಂದ ಅವರು ಹೊರಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.
ನಗರ ಪ್ರದೇಶದಲ್ಲಿ ಗೃಹ ಬಳಕೆಗಾಗಿ 30 ಯೂನಿಟ್ ವರೆಗೆ ವಿದ್ಯುತ್ ಬಳಸಿದರೆ, ಅವರಿಗೆ ಪ್ರತಿ ಯೂನಿಟ್‌ಗೆ 25 ಪೈಸೆ ಹೆಚ್ಚಳ, 31 ರಿಂದ 100 ಯೂನಿಟ್ ಬಳಕೆದಾರರಿಗೆ 30 ಪೈಸೆ, 101 ರಿಂದ 200ರವರೆಗೆ 35 ಪೈಸೆ, 200 ಯೂನಿಟ್ ದಾಟಿದವರಿಗೆ 45 ಪೈಸೆ ಪ್ರತಿ ಯೂನಿಟ್‌ಗೆ ಏರಿಕೆ ಮಾಡಲಾಗಿದೆ ಎಂದರು.
ಬೆಂಗಳೂರು ವ್ಯಾಪ್ತಿಯಲ್ಲಿ 201 ರಿಂದ 300 ಯೂನಿಟ್‌ವರೆಗೆ ಬಳಸುವವರಿಗೆ 40 ಪೈಸೆ, 301 ರಿಂದ 400 ಯೂನಿಟ್ ಬಳಸುವವರಿಗೆ 45 ಪೈಸೆ, 400 ಯೂನಿಟ್‌ಗೂ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್‌ಗೆ 50 ಪೈಸೆ ದರ ಹೆಚ್ಚಳ ಮಾಡಲಾಗಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ 30 ಯೂನಿಟ್ ಬಳಕೆದಾರರಿಗೆ 25 ಪೈಸೆ, 31 ರಿಂದ 100 ಯೂನಿಟ್ ಬಳಕೆದಾರರಿಗೆ 30 ಪೈಸೆ, 100 ಮೇಲ್ಪಟ್ಟು ಬಳಸುವವರಿಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ ಎಂದರು.

ಬೆಸ್ಕಾಂ ವ್ಯಾಪ್ತಿಯ ಅರೆನಗರ, ಗ್ರಾಮಾಂತರ ಪ್ರದೇಶದಲ್ಲಿ 201 ರಿಂದ 300 ಯೂನಿಟ್ ಬಳಸುವವರಿಗೆ 40 ಪೈಸೆ, 300 ಯೂನಿಟ್‌ಗೆ ಹೆಚ್ಚು ಬಳಸುವವರಿಗೆ 45 ಪೈಸೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಒಂದು ಲಕ್ಷಕ್ಕೂ ಅಧಿಕ ಯೂನಿಟ್ ಹೆಚ್.ಪಿ. ವಿದ್ಯುತ್ ಬಳಕೆದಾರರು ವಿದ್ಯುತ್ ಕಂಪನಿಗಳಿಂದ ಕೈತಪ್ಪಿಹೋಗಲಿವೆ ಎನ್ನುವ ಆತಂಕದಿಂದ ಒಂದು ಲಕ್ಷ ಯೂನಿಟ್‌ಗೆ ಮೈಲ್ಪಟ್ಟು ಬಳಸುವ ವಿದ್ಯುತ್ ಕೈಗಾರಿಕೆಗಳಿಗೆ 10 ರಿಂದ 20 ಪೈಸೆ ನಿಗದಿ ಮಾಡಲಾಗಿದೆ.
ಬೆಸ್ಕಾಂ ಮತ್ತು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯ ಕೈಗಾರಿಕೆಗಳಿಗೆ 20 ಪೈಸೆ ಪ್ರತಿ ಯೂನಿಟ್‌ಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಡಯೋಗ್ನೋಸ್ಟಿಕ್, ಕ್ಲಿನಿಕಲ್ ಲ್ಯಾಬ್‌ಗಳಲ್ಲಿ ಬಳಸುವ ವಾಣಿಜ್ಯ ವ್ಯಾಪ್ತಿಗೆ ಅಳವಡಿಸಿಕೊಳ್ಳಲಾಗಿದೆ ಎಂದರು.
ರಿಯಾಯಿತಿ
ಬೀದಿ ದೀಪಗಳಲ್ಲಿ ಎಲ್.ಇ.ಡಿ. ಬಲ್ಬ್ ಅಳವಡಿಸಿಕೊಳ್ಳುವ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಯೂನಿಟ್‌ಗೆ ಒಂದು ರೂ. ರಿಯಾಯಿತಿ ನೀಡಲಾಗಿದೆ. ಎಲ್.ಇ.ಡಿ. ದೀಪವಲ್ಲದೆ ಬೇರೆ ವಿದ್ಯುತ್ ದೀಪ ಬಳಸುವವರಿಗೆ ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚಳ ಮಾಡಿದ್ದು, ಹಾಲಿ ದರ 5.85 ಪೈಸೆ ಎಂದು ವಿವರ ನೀಡಿದರು.
ನೀರಾವರಿ ಪಂಪ್ ಸೆಟ್‌ಗಳಿಗೆ ರಾಜ್ಯ ಸರ್ಕಾರ 2016-17ನೇ ಸಾಲಿನಲ್ಲಿ 8,838 ಕೋಟಿ ರೂ. ಸಹಾಯಧನ ನೀಡಿದ್ದು, ಈ ವರ್ಷ ಹೆಚ್ಚುವರಿಯಾಗಿ ಇನ್ನೂ 1100 ಕೋಟಿ ರೂ. ನೀಡಬೇಕಾಗುತ್ತದೆ ಎಂದು ಹೇಳಿದರು.
ವಿದ್ಯುತ್ ವಿತರಣಾ ನಷ್ಟ ಗುಲ್ಬರ್ಗಾದಲ್ಲಿ ಶೇ. 18 ರಷ್ಟು, ಬೆಂಗಳೂರು ನಗರದಲ್ಲಿ ಶೇ. 12.5 ರಷ್ಟಿದೆ. ಒಟ್ಟಾರೆ ವಿದ್ಯುತ್ ಪ್ರಸರಣ ನಷ್ಟ ಶೇ. 16 ರಷ್ಟು ದಾಟಿದ್ದು, ಅದನ್ನು ಶೇ. 15 ರೊಳಗೆ ಇಳಿಸಲು ಕ್ರಮ ಕೈಗೊಳ್ಳುವಂತೆ ವಿದ್ಯುತ್ ಕಂಪನಿಗಳಿಗೆ ಸೂಚಿಸಲಾಗಿದೆ ಎಂದರು.

Leave a Comment