ಲಿಬಱ್ಹಾನ್ ಆಯೋಗದ ವರದಿಯಂತೆ ಆರೋಪಿಗಳ ಬಂಧಿಸಲು ಒತ್ತಾಯ

ದಾವಣಗೆರೆ, ಡಿ.6- ಬಾಬರಿ ಮಸೀದಿ ಧ್ವಂಸ ಖಂಡಿಸಿ ಹಾಗೂ ಲಿಬಱ್ಹಾನ್ ಆಯೋಗದ ವರದಿಯಂತೆ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಕೋಮುಸೌಹಾರ್ದ ವೇದಿಕೆ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದಂದು ಕೋಮುವಾದಿಗಳು ಈ ದಿನವನ್ನು ದುರುದ್ದೇಶಪೂರಕವಾಗಿ ಬಳಸಿಕೊಂಡು ಬಾಬರಿ ಮಸೀದಿ ಧ್ವಂಸ ಮಾಡುವ ಮೂಲಕ ಕೋಮುದ್ವೇಷವನ್ನು ಸಾರಿದ್ದಾರೆ. ನೆಮ್ಮದಿಯಾಗಿದ್ದ ಭಾರತಕ್ಕೆ ಭಯೋತ್ಪಾದನೆ, ಕೋಮುವೈಷ್ಯಮದ ಮನಸ್ಥಿತಿಯನ್ನು ಸೃಷ್ಟಿ ಮಾಡಿದ್ದಾರೆ. ಕಳೆದ 65 ವರ್ಷಗಳಿಂದ ಬಾಬರಿ ಮಸೀದಿಯನ್ನು ಕೋಮುವಾದಿಗಳು ಒಂದು ಧರ್ಮದ ಹೆಸರಿನಲ್ಲಿ ಧ್ವಂಸ ಮಾಡಿರುವುದು ಖಂಡನೀಯ. ಈ ಪ್ರಕರಣವನ್ನು ತನಿಖೆ ಮಾಡಲು ಅಂದಿನ ಕೇಂದ್ರ ಸರ್ಕಾರ ಲಿಬಱ್ಲಾನ್ ಆಯೋಗವನ್ನು ನೇಮಕ ಮಾಡಲಾಗಿತ್ತು. ಆ ಆಯೋಗವು ವರದಿ ಸಲ್ಲಿಸಿ ವರ್ಷಗಳೇ ಕಳೆದರು ಇಲ್ಲಿಯವರೆಗೂ ಕಾನೂನಾತ್ಮಕ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಕೆಲ ಕೋಮುವಾದಿ ಸಂಘಟನೆಗಳು ದೇಶದಲ್ಲಿರುವ ಇನ್ನು ಅನೇಕ ಮಸೀದಿಗಳ ಮತ್ತು ದರ್ಗಾಗಳ ಮೇಲೆ ಕಣ್ಣಿಟ್ಟಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮವಹಿಸಬೇಕು. ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿ ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅನಿಷ್ ಪಾಷಾ, ಇಸ್ಮಾಯಿಲ್ ದೊಡ್ಮನಿ, ವಿಜಯಕುಮಾರ್, ಅಮಾನುಲ್ಲಾಖಾನ್,ಖಾದರ್ ಬಾಷಾ, ಆದಿಲ್ ಖಾನ್, ಅನಿಫ್ ಸಾಬ್, ಅಯಾಜ್ ಹುಸೇನ್, ಶ್ರೀನಿವಾಸ್ ಸೇರಿದಂತೆ ಅನೇಕರಿದ್ದರು.

Leave a Comment