ಲಿಂಗ ಬದಲಾವಣೆಗೆ ಹೆಚ್ಚಿದ ಬೇಡಿಕೆ

ನವದೆಹಲಿ, ಜು. ೧೭- ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಈಗ ಹೆಚ್ಚೆಚ್ಚು, ಮಂದಿ ಮುಂದೆ ಬಂದಿದ್ದಾರೆ. ಈ ಮೊದಲು ವರ್ಷಕ್ಕೆ ಒಂದೋ – ಎರಡು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದರೆ, ಈಗ ಪ್ರತಿ ತಿಂಗಳೂ 3-4 ಜನ ಲಿಂಗ ಬದಲಾವಣೆಗೆ, ಶಸ್ತ್ರಚಿಕಿತ್ಸೆಗೆ ಒಳಗಾಗಲು ಆಸಕ್ತಿ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ ಎಂದು ವೈದ್ಯರು ಹೇಳುತ್ತಾರೆ.

ಇಂತಹ ಆಸಕ್ತಿದಾರರಿಗೆ ತಾವು ಯಾವ ಲಿಂಗಕ್ಕೆ ಪರಿವರ್ತನೆ ಹೊಂದಬೇಕೋ ಅದರಂತೆ ಕನಿಷ್ಠ 6 ತಿಂಗಳು ಅವರ ಆಸಕ್ತಿಗೆ ಅನುಗುಣವಾಗಿ ಅವರಂತೆಯೇ ಬಟ್ಟೆ ಹಾಕಿ ಅಂತವರ ಜತೆಯೇ ಬದುಕಬೇಕೆಂದು ಡಾಕ್ಟರುಗಳು ತಮ್ಮ ರೋಗಿಗಳಿಗೆ ಸೂಚಿಸುತ್ತಿದ್ದಾರೆ.

ಕೇಂದ್ರ, ದೆಹಲಿಯ ಲೋಕ ನಾಯಕ ಜಯ ಪ್ರಕಾಶ್ ಆಸ್ಪತ್ರೆಯಲ್ಲಿ ಈ ಆಪರೇಷನ್‌ಗಾಗಿ ಈಗ ಸರದಿ ಸಾಲಿನಲ್ಲಿ ಕಾಯುವಂತಾಗಿದೆ. ಅಂದಾಕ್ಷಣ ಅಪಾರ ಸಂಖ್ಯೆಯಲ್ಲಿ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆಂದಲ್ಲ, ಆದರೆ ಈ ಆಪರೇಷನ್‌ಗೆ ಹಿಂದಿದ್ದಕ್ಕಿಂತ ಹೆಚ್ಚು ಜನ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ.

ಸೆಕ್ಸ್ ಬದಲಾವಣೆ ಆಪರೇಷನ್‌ಗೆ ದೆಹಲಿಯಲ್ಲಿ ಆಸಕ್ತಿ ಹೆಚ್ಚುತ್ತಿರುವುದನ್ನು ನೋಡಿದರೆ ಹಿಂದಿದ್ದಂತಹ ಮೂಢನಂಬಿಕೆಗಳು ಈಗ ಕರಗಿ ಹೋಗುತ್ತಿರುವುದು ಗೋಚರಿಸುತ್ತದೆ.

ಈಗ ಕಾಯುತ್ತಿರುವವರ ಪಟ್ಟಿಯಲ್ಲಿ ಇಬ್ಬರು ಇಂಜಿನಿಯರ್‌ಗಳು ಮತ್ತು ಒಬ್ಬ ವೈದ್ಯಕೀಯ ವಿದ್ಯಾರ್ಥಿ ಇದ್ದಾರೆ. ಇದೇನೂ ಆಶ್ಚರ್ಯಪಡುವ ಸಂಗತಿಯಲ್ಲವೆಂದು ಆಸ್ಪತ್ರೆ ಪ್ಲಾಸ್ಟಿಕ್ ಸರ್ಜರಿ ಮುಖ್ಯಸ್ಥ ಡಾ. ಪಿ.ಎಸ್. ಭಂಡಾರಿ ಹೇಳುತ್ತಾರೆ. ಇವರೆಲ್ಲ ಬಹುತೇಕ ಮಧ್ಯಮ ವರ್ಗದಿಂದ ಬಂದವರೇ ಆಗಿದ್ದಾರೆ ಎಂದು ಮನೋ ವಿಜ್ಞಾನಿ ಡಾ. ರಾಜೀವ್ ಮೆಹ್ತಾ ಹೇಳುತ್ತಾರೆ.

27 ವರ್ಷದ ನೋಯ್ಡಾದ ಇಳಾ ಹುಡುಗಿಯಾಗಿ ಹುಟ್ಟಿದ್ದರೂ ಬೆಳೆದಂತೆಲ್ಲ ಆಕೆಗೆ ಹೆಣ್ಣುಮಗಳಂತೆ ಉಡುಪು ಧರಿಸುವುದು, ಗೊಂಬೆಗಳೊಂದಿಗೆ ಆಟ ಆಡುವುದು ಇಷ್ಟವಾಗುತ್ತಿರಲಿಲ್ಲ. ಅವಳಿಗೆ ಹುಡುಗನಂತೆ ಇರಬೇಕೆಂಬ ಮಾನಸಿಕ ತುಮುಲವಿತ್ತು. ಆದರೆ ಮನೆಯವರು ಇದಕ್ಕೆ ಒಪ್ಪುತ್ತಿರಲಿಲ್ಲ ಮತ್ತು ಅವರೊಂದಿಗೆ ಸದಾ ಸಂಘರ್ಷವಾಗಿ ಆಕೆ ಜಿಗುಪ್ಸೆಯ ಹಂತ ತಲುಪಿದಳು. ಎಷ್ಟೋ ಸಲ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಅಪಾರ ನಿದ್ರೆ ಮಾತ್ರೆ ನುಂಗಿದಳು. ಆದರೂ ಆಕೆಯ ಪೋಷಕರು ಆಕೆಯನ್ನು ಉಳಿಸಿಕೊಂಡರು.

ಆಗ ಆಕೆ ತೀವ್ರತರದ ಜಿಗುಪ್ಸೆಯಿಂದ ಬಳಲುತ್ತಿರುವುದನ್ನು ವೈದ್ಯರು ಪತ್ತೆಹಚ್ಚಿದರು. ಅದಕ್ಕಾಗಿ ಆಕೆ ಮದ್ಯಪಾನ, ನಿಕೋಟಿನ್‌ಗೆ ದಾಸಳಾಗಿದ್ದಾಳೆಂದು ಡಾ. ಮೆಹ್ತಾ ವಿವರಿಸುತ್ತಾರೆ.

ಆಕೆ ದಿನಕ್ಕೆ ಅರ್ಧ ಬಾಟಲ್ ವಿಸ್ಕಿ, 20 ಸಿಗರೇಟ್ ಸೇದುವುದು ಸಾಮಾನ್ಯವಾಗಿತ್ತು. ಆಕೆಗೆ ಮಹಿಳೆಯ ದೇಹದಲ್ಲೊಬ್ಬ ಪುರುಷ ಬಂಧಿಯಾದ ಅನುಭವವಾಗಿತ್ತು. ಆಗ ವೈದ್ಯರು ಆಕೆಯ ಪೋಷಕರಿಗೆ ಆಕೆಯ ದೇಹದ ರಚನೆಯ ಸ್ಥಿತಿಗತಿ ವಿವರಿಸಿದರು. ಅದನ್ನು ಅವರೂ ಒಪ್ಪಿಕೊಂಡರು. ನಂತರ ಆಕೆಯನ್ನು ಚಟಗಳಿಂದ ಬಿಡಿಸಲು ವೈದ್ಯಕೀಯ ಚಿಕಿತ್ಸೆ ಆರಂಭಿಸಿದರು. ಆಕೆಯನ್ನು ಗಂಡಸಿನಂತೆ ಜೀವಿಸಲು ಪ್ರೋತ್ಸಾಹಿಸಿದರು. ಅನೇಕ ತಿಂಗಳು ಅವಳಿಗೆ ಪುರುಷರ ಹಾರ್ಮೋನ್ ಟೆಸ್ಟೋಸ್ಟಿರೋನ್ ನೀಡಲಾಯಿತು. ನಂತರ ಮುಂಬೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಮಹಿಳಾ ಅಂಗಾಂಗಗಳನ್ನು ತೆಗೆದು ಹಾಕಲಾಯಿತು. ಗಂಡಸಿನ ಅಂಗಾಂಗಗಳನ್ನು ಪುನರ್ ನಿರ್ಮಿಸಲಾಯಿತು. ಒಮ್ಮೆ ಸೆಕ್ಸ್ ಬದಲಾವಣೆ ಮಾಡಿಕೊಂಡರೆ ಮತ್ತೆ ಅದನ್ನು ಬದಲಾಯಿಸಲಾಗುವುದಿಲ್ಲ. ಅದಕ್ಕೆಂದೇ ಅವರನ್ನು ತಯಾರು ಮಾಡಲು 6 ತಿಂಗಳು ಅವರ ಬಯಕೆಯ ಲಿಂಗ ಪರಿವರ್ತನೆಯ ವ್ಯಕ್ತಿಯಂತೆ ಬದುಕಲು ಅವಕಾಶ ಕಲ್ಪಿಸಿ ಅವರು ಅದಕ್ಕೆ ಹೊಂದಿಕೊಂಡ ನಂತರವೇ ಆಪರೇಷನ್ ಮಾಡಲಾಗುತ್ತದೆ ಎಂದು ವೈದ್ಯರು ವಿವರಿಸಿದರು.

ಇಂತಹ ಸೆಕ್ಸ್ ಬದಲಾವಣೆ ಆಪರೇಷನ್‌ಗೆ ಮುಂಚಿತವಾಗಿ ಆ ರೋಗಿಯನ್ನು ಮನೋ ವೈದ್ಯರು ಸಂಪೂರ್ಣವಾಗಿ ಪರೀಕ್ಷಿಸುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಆಪರೇಷನ್ ದುಬಾರಿಯಾಗಿರುವುದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ಆಸಕ್ತರು ಬರುತ್ತಿದ್ದಾರೆಂದು ವೈದ್ಯರು ಹೇಳುತ್ತಾರೆ.

Leave a Comment