ಲಾಲೂ ಜಾಮೀನು ಅರ್ಜಿ: ಸಿಬಿಐಗೆ ನೋಟೀಸ್

ನವದೆಹಲಿ, ಮಾ. ೧೫: ಬಹುಕೋಟಿ ಮೇವು ಹಗರಣ ಸಂಬಂಧವಾಗಿ ೩ ಪ್ರಕರಣ ಎದುರಿಸುತ್ತಿರುವ ಆರ್.ಜೆ.ಡಿ. ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರೀಯ ತನಿಖಾ ಸಂಸ್ಥೆ (ಸಿ.ಬಿ.ಐ.)ಗೆ ಸೂಚನೆ ನೀಡಿದೆ.

ಪ್ರಕರಣಗಳಿಗೆ ಸಂಬಂಧಿಸಿದಂತೆ ತಮಗೆ ಜಾಮೀನು ನಿರಾಕರಿಸಿ ಜಾರ್ಖಂಡ್ ಹೈಕೋರ್ಟ್ ನೀಡಿದ್ದ ಜನವರಿ ೧೦ರ ಆದೇಶವನ್ನು ಪ್ರಶ್ನಿಸಿ ಲಾಲೂ ಯಾದವ್ ಮೇಲ್ಮನವಿ ಸಲ್ಲಿಸಿರುವ ಕುರಿತು ಇನ್ನು ೨ ವಾರಗಳ ಒಳಗೆ ಪ್ರತಿಕ್ರಿಯೆ ನೀಡಬೇಕೆಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ಸಿಬಿಐಗೆ ಈ ನಿರ್ದೇಶನ ನೀಡಿತು.
ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿನ ಬಿರ್ಸಾಮುಂಡಾ ಕೇಂದ್ರ ಕಾರಾಗೃಹದಲ್ಲಿ ಯಾದವ್‌ರನ್ನು ಬಂಧಿಸಿಡಲಾಗಿದೆ.
ಅವಿಭಜಿತ ಬಿಹಾರದಲ್ಲಿ ೧೯೯೦ರ ಆರಂಭದಲ್ಲಿ ಆರ್.ಜೆ.ಡಿ.ಯ ಲಾಲೂ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಪಶು ಸಂಗೋಪನಾ ಇಲಾಖೆಯಲ್ಲಿ ೯೦೦ ಕೋಟಿ ರೂ. ಬೃಹತ್ ಮೊತ್ತದ ಮೇವು ಹಗರಣ ನಡೆದಿತ್ತು.

Leave a Comment