ಲಾರಿ ಬೈಕ್‌ಗೆ ಡಿಕ್ಕಿ: ಯುವಕ ಸಾವು

ಬೆಂಗಳೂರು, ಆ. ೩೦- ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು, ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಮೃತಪಟ್ಟರೆ, ಮತ್ತೊಬ್ಬ ಯುವಕ ಗಾಯಗೊಂಡಿರುವ ದುರ್ಘಟನೆ ಕಾಡುಗೋಡಿ ಮುಖ್ಯರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಕಾಡುಗೋಡಿಯ ಪ್ರಕಾಶ್ ಚಂದ್ರ ರೂಟ್ (23) ಮೃತಪಟ್ಟಿದ್ದು, ಗಾಯಗೊಂಡಿರುವ ಸಾಯಿ ವೆಂಕಟೇಶ್ (23)ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಕ್ಯಾಬ್‌ಜನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾದ ಭುವನೇಶ್ವರ್ ಮೂಲದ ಪ್ರಕಾಶ್ ಚಂದ್ರ ರೂಟ್ ಅವರು ರಾತ್ರಿ 12.30ರ ವೇಳೆ ವೆಂಕಟೇಶ್‌ನನ್ನು ಹಿಂದೆ ಕೂರಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು.
ಮಾರ್ಗಮಧ್ಯೆ ಕಾಡುಗೋಡಿ ಮುಖ್ಯರಸ್ತೆಯ ಓ ಫಾರಂ ಬಳಿ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಎಡಗಡೆ ಬಿದ್ದ ಪ್ರಕಾಶ್ ಚಂದ್ರ ರೂಟ್ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟರೆ, ಬಲಗಡೆ ಬಿದ್ದ ಸಾಯಿ ವೆಂಕಟೇಶ್ ಅವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ದಾಖಲಿಸಿರುವ ವೈಟ್ ಫೀಲ್ಡ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಯುವಕ ನೇಣು
ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿಯಲ್ಲಿ ನಿನ್ನೆ ರಾತ್ರಿ ಜೀವನದಲ್ಲಿ ಜುಗುಪ್ಸೆ ಹೊಂದಿದ ಯುವಕ ಭೂಮಿಕ್ ಎಸ್. ಪ್ರಭು (21) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ 11ರ ವೇಳೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಭೂಮಿಕ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಿರುವ ರಾಜರಾಜೇಶ್ವರಿ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment