ಲಾರಿ ಡಿಕ್ಕಿ ಬೈಕ್ ಸವಾರ ಸಾವು

ಬೆಂಗಳೂರು, ಸೆ. ೧೦- ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಕೆ.ಜಿ. ಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ದೇವರ ಜೀವನಹಳ್ಳಿಯ ನದೀಂ ಪಾಷ (23) ಮೃತಪಟ್ಟವರು. ಎಚ್‌ಬಿಆರ್ ಲೇಔಟ್‌ನಲ್ಲಿ ಟಿವಿ ರಿಪೇರಿ ಅಂಗಡಿ ನಡೆಸುತ್ತಿದ್ದ ನದೀಂ ಪಾಷ ರಾತ್ರಿ 12.30ರ ವೇಳೆ ಕೆಲಸ ಮುಗಿಸಿಕೊಂಡು ಪಲ್ಸರ್ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದರು.
ಮಾರ್ಗಮಧ್ಯೆ ಕೆ.ಜಿ. ಹಳ್ಳಿಯ ನರೇಂದ್ರ ಟೆಂಟ್ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಕೆ.ಜಿ. ಹಳ್ಳಿ ಸಂಚಾರಿ ಪೊಲೀಸರು, ಲಾರಿಯನ್ನು ವಶಪಡಿಸಿಕೊಂಡು ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಸರಣಿ ಅಪಘಾತ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಇಂದು ಬೆಳಿಗ್ಗೆ ಮೂರು ಕಾರುಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಮಾನ ನಿಲ್ದಾಣ ರಸ್ತೆಯ ಸಾದಾಹಳ್ಳಿ ಗೇಟ್ ಬಳಿ ಮುಂದೆ ಹೋಗುತ್ತಿದ್ದ ಕ್ಯಾಬ್‌ಗೆ ಓಮ್ನಿ ವ್ಯಾನ್ ಡಿಕ್ಕಿ ಹೊಡೆದು ಆ ಕಾರು ಮತ್ತೊಂದಕ್ಕೆ ಡಿಕ್ಕಿ ಹೊಡೆದು ಲಾರಿಗೂ ಅಪ್ಪಳಿಸಿ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಚಾಲಕನ ಮೇಲೆ ಹಲ್ಲೆ
ಆರ್‌ಎಂಸಿ ಯಾರ್ಡ್‌ನ ಎಫ್‌ಡಿಐ ವೃತ್ತದಲ್ಲಿ ನಿನ್ನೆ ರಾತ್ರಿ 12.30ರ ವೇಳೆ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಇಬ್ಬರು ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಚಾಲಕನ ಮೇಲೆ ಜಗಳ ತೆಗೆದು ಹಲ್ಲೆ ನಡೆಸಿ, ಲಾರಿಯ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಆರ್‌ಎಂಸಿ ಯಾರ್ಡ್ ಪೊಲೀಸರು ದಾಂಧಲೆ ನಡೆಸಿದ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

Leave a Comment