ಲಾರಿ ಟ್ಯಾಂಕರ್ ಮೈಮೇಲೆ ಹರಿದು ನಾಲ್ವರ ದುರ್ಮರಣ

 

ಜೇವರ್ಗಿ,ಅ.11-ರಸ್ತೆ ಬದಿ ನಿಂತಿದ್ದವರ ಮೇಲೆ ಲಾರಿ ಟ್ಯಾಂಕರ್ ಹರಿದು ಹೋಗಿ ನಾಲ್ವರು ಮೃತಪಟ್ಟು, ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾದ ದಾರುಣ ಘಟನೆ ಜೇವರ್ಗಿ ತಾಲ್ಲೂಕಿನ ಜೇರಟಗಿ ಬಳಿ ಇಂದು ಬೆಳಗಿನಜಾವ ನಡೆದಿದೆ.

ಮೃತರನ್ನು ಜೇರಟಗಿ ಗ್ರಾಮದ ಶ್ರೀಕಾಂತ ದ್ಯಾವಣ್ಣ ಬಡಿಗೇರ (20), ಮೋಹಿದ್ ರಫಿಕ್ (18), ಕೋನ್ ಪಟೇಲ್ ರಂಜಣಗಿ ಮತ್ತು ಉತ್ತರ ಪ್ರದೇಶ ಮೂಲದ ಪಾನಿಪುರಿ ವ್ಯಾಪಾರಿ ಗೋಲು (25) ಎಂದು ಗುರುತಿಸಲಾಗಿದೆ.

ಅನೀಲ, ಪ್ರಕಾಶ ಮತ್ತು ವಿಜಯಕುಮಾರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜೇರಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಅಪಘಾತದಲ್ಲಿ ಇಬ್ಬರರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಲಾರಿ ಟ್ಯಾಂಕರ್ ಮೈಮೇಲೆ ಹರಿದು ಹೋಗಿರುವುದರಿಂದ ರಸ್ತೆಯ ಮೇಲೆಲ್ಲ ರಕ್ತ ಚಲ್ಲಾಡಿದೆ. ವಿಷಯ ತಿಳಿದು ಮೃತರ ಸಂಬಂಧಿಕರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸುದ್ದಿ ತಿಳಿದು ಜೇವರ್ಗಿ ಸಿಪಿಐ ಡಿ.ಬಿ.ಪಾಟೀಲ, ನೆಲೋಗಿ ಪಿಎಸ್ಐ ಸಿದ್ರಾಮ ಬಳೂರ್ಗಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

@12bc = ರಸ್ತೆತಡೆ

ಜೇರಟಗಿ ಬಳಿ ಪದೇ ಪದೇ ರಸ್ತೆ ಅಪಘಾತವಾಗುತ್ತಿರುವುದನ್ನು ತಡೆಯಬೇಕು ಮತ್ತು ಲಾರಿ ಟ್ಯಾಂಕರ್ ಚಾಲಕನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ರಸ್ತೆತಡೆ ನಡೆಸಿದರು. ಇದರಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

 

Leave a Comment