ಲಾರಿ-ಕಾರ್ ಮುಖಾಮುಖಿ ಡಿಕ್ಕಿ

೯ ಜನರ ದುರ್ಮರಣ

ಮಂಗಳೂರು, ಸೆ.೧೩- ಲಾರಿ ಮತ್ತು ಝೈಲೋ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ೯ ಮಂದಿ ದಾರುಣ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಅರಬೈಲುಘಟ್ಟ ಎಂಬಲ್ಲಿ ನಡೆದಿದೆ. ಮೃತರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಓರ್ವ ಗಂಭೀರ ಗಾಯಗೊಂಡಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ರಾಯಭಾಗ ನಿವಾಸಿಗಳಾಗಿದ್ದು ಮಾಜಿ ಸಚಿವರೊಬ್ಬರ ಸಂಬಂಧಿಗಳೆಂದು ಹೇಳಲಾಗಿದೆ. ಇವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಾಪಸ್ ಆಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ರಾ.ಹೆ. ೬೩ರ ಅರಬೈಲುಘಟ್ಟ ಎಂಬಲ್ಲಿ ಕಾರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಮೊನ್ನೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ಒಂದೇ ಕುಟುಂಬಕ್ಕೆ ಸೇರಿದ ಮಂದಿ ನಿನ್ನೆ ದೇವರ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದು, ಹುಬ್ಬಳ್ಳಿಯಿಂದ ಆಂಕೋಲಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರಲ್ಲಿ ಓರ್ವ ಮಾತ್ರ ಬದುಕುಳಿದಿದ್ದು ಆತನನ್ನು ತಕ್ಷಣವೇ ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿಯೂ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದಾಗಿ ರಸ್ತೆ ಸಂಚಾರ ಗಂಟೆಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಕಾರವಾರ ಠಾಣಾ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮೃತರ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Leave a Comment