ಲಾರಿಗೆ ಬಸ್ ಡಿಕ್ಕಿ: ಮೂವರ ದುರ್ಮರಣ,14ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ತುಮಕೂರು, ನ. ೩- ಸೋಪ್ ತುಂಬಿಕೊಂಡು ಮುಂದೆ ಹೋಗುತ್ತಿದ್ದ ಲಾರಿಗೆ ಅತಿ ವೇಗವಾಗಿ ಬಂದ ಖಾಸಗಿ ಬಸ್ ಹಿಂದಿನಿಂದ ಅಪ್ಪಳಿಸಿದ ಪರಿಣಾಮ 3 ಮಂದಿ ಸ್ಥಳದಲ್ಲೇ ಮೃತಪಟ್ಟು, 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಊರುಕೆರೆ-ರಂಗಾಪುರ ಚೆಕ್‌ಪೋಸ್ಟ್ ನಡುವೆ ರಾಷ್ಟ್ರೀಯ ಹೆದ್ದಾರಿ-48 ರ ಬಳಿ ಇಂದು ಬೆಳಗ್ಗೆ 6.30 ರಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಿಕ್ಕೋಡಿಯ ರಾಮಪ್ಪ ಎಲೆಬಳ್ಳಿ (43), ಬೆಳಗಾವಿಯ ತಸ್ತುಲ್ಲಾ (30) ಹಾಗೂ ಬಸ್ ಕ್ಲೀನರ್ ಫಜಲ್ (29) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 17 ಮಂದಿಯನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾಂನಿಂದ 10.30 ಕ್ಕೆ ಬೆಂಗಳೂರಿಗೆ ಹೊರಟ ನ್ಯಾಷನಲ್ ಸ್ಲೀಪರ್ ಕೋಚ್ ಬಸ್‌ನಲ್ಲಿ 36 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ದೆಹಲಿಯಿಂದ ಲಕ್ಸ್ ಸೋಪ್ ತುಂಬಿಕೊಂಡು ಕೇರಳಕ್ಕೆ ಲಾರಿ ತೆರಳುತ್ತಿತ್ತು. ಮಾರ್ಗಮಧ್ಯೆ ತುಮಕೂರು ಸಮೀಪ ಊರುಕೆರೆ ರಂಗಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಮೇಲ್ಸೆತುವೆ ಮೇಲೆ ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಖಾಸಗಿ ಬಸ್ ಅಪ್ಪಳಿಸಿದ್ದರಿಂದ ಲಾರಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸುಮಾರು ಕಾಲು ಕಿ.ಮೀ. ಮುಂದಕ್ಕೆ ಹೋಗಿ ರಸ್ತೆಯ ಎಡಬದಿಯಲ್ಲಿ ಹಾಕಲಾಗಿದ್ದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಇದರ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಚಾಲಕರು ಹಾಗೂ ಓರ್ವ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗದಲ್ಲಿ ಕುಳಿತಿದ್ದ ಚಾಲಕ ಮೂರು ಮಂದಿ ಸ್ಥಳದಲ್ಲೇ ಅಸುನೀಗಿದರೆ, ಕೊಟ್ಟೇಶ್ವರ (57) ಎಂಬುವರಿಗೆ ಬಲಗಾಲು ಮುರಿದಿದ್ದು, ಹೈದರಾಬಾದ್‌ನ ನಿವಾಸಿ ಕೀರ್ತಿ (36) ಎಂಬುವರಿಗೆ ಕುತ್ತಿಗೆ ಮೂಳೆ ಮುರಿತ, ಅಶ್ವಿನ್‌ಕುಮಾರ್ (32) ಅವರಿಗೂ ಕುತ್ತಿಗೆ ಮೂಳೆ ಮುರಿತ ಹಾಗೂ ರಾಜೇಶ್ (32) ಎಂಬುವರಿಗೆ ತೀವ್ರ ಪೆಟ್ಟಾಗಿದ್ದು, ಇವರುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯಲಾಗಿದೆ.
ಮುಂಜಾನೆ 6.30 ರಲ್ಲಿ ಸಂಭವಿಸಿದ ಈ ಭೀಕರ ಅಪಘಾತದ ಶಬ್ದ ಕೇಳುತ್ತಿದ್ದಂತೆಯೇ ಸ್ಥಳೀಯ ರಂಗಾಪುರ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ-48 ಕ್ಕೆ ದೌಡಾಯಿಸಿ ಬಸ್‌ನಲ್ಲಿ ಸಿಲುಕಿಕೊಂಡು ಕಿರುಚಾಡುತ್ತಿದ್ದ ಗಾಯಾಳುಗಳನ್ನು ಹೊರಗೆ ಕರೆತಂದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.
ಘಟನೆ ಸುದ್ದಿ ತಿಳಿದ ಕೂಡಲೇ ತುಮಕೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್‌ನಲ್ಲಿ ಸಿಲುಕಿಕೊಂಡಿದ್ದ ಶವಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ಶ್ರಮಿಸಿದರು.
ಈ ಭೀಕರ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಲಾರಿಯಲ್ಲಿ ತುಂಬಿದ್ದ ಸೋಪ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಗ್ರಾಮಾಂತರ ಸಿಪಿಐ ರಾಮಕೃಷ್ಣ, ಡಿವೈಎಸ್‌ಪಿ ತಿಪ್ಪೇಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸೋಪ್‌ಗಳು ಹಾಗೂ ಉರುಳಿ ಬಿದ್ದಿದ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಬೆಳಗ್ಗೆಯಿಂದಲೇ ಡಿಹೆಚ್ಓ ಡಾ. ಚಂದ್ರಿಕಾ, ಆರ್ಎಂ ಓ ಡಾ. ವೀಣಾ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸ ಡಾ. ವೀರಭದ್ರಯ್ಯ ಜಿಲ್ಲಾಸ್ಪತ್ರೆಯಲ್ಲಿ ಮೊಕ್ಕಂ ಹೂಡಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment