ಲಾಡ್‌ಡೌನ್ ಉಲ್ಲಂಘಿಸಿ ಜಾಲಿರೈಡ್ ನಟಿ ಶರ್ಮಿಳಾ ಮಾಂಡ್ರೆಗೆ ಗಾಯ

ಬೆಂಗಳೂರು,ಏ.೪-ಲಾಕ್‌ಡೌನ್‌ನನ್ನು ಉಲ್ಲಂಘಿಸಿ ಜಾಗ್ವಾರ್ ಕಾರಿನಲ್ಲಿ ಜಾಲಿರೈಡ್‌ಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಸೇರಿ ಇಬ್ಬರು ಗಾಯಗೊಂಡಿರುವ ದುರ್ಘಟನೆ ವಸಂತನಗರದ ರೈಲ್ವೆ ಕೆಳ ಸೇತುವೆ ರಸ್ತೆಯಲ್ಲಿ ಇಂದು ನಸುಕಿನಲ್ಲಿ ನಡೆದಿದೆ.
ಗಾಯಗೊಂಡಿರುವ ನಟಿ ಶರ್ಮಿಳಾ ಮಾಂಡ್ರೆ(೩೩) ಮತ್ತವರ ಸ್ನೇಹಿತ ಲೋಕೇಶ್ ವಸಂತ್(೩೫)ಅವರು ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತಗೊಂಡ ಕಾರನ್ನು ವಶಪಡಿಸಿಕೊಂಡಿರುವ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ನಾರಾಯಣ ತಿಳಿಸಿದ್ದಾರೆ.
ಲಾಕ್‌ಡೌನ್ ಉಲ್ಲಂಘಿಸಿ ನಟಿ ಶರ್ಮಿಳಾ ಮಾಂಡ್ರೆ ಅವರು ಸ್ನೇಹಿತ ಲೋಕೇಶ್ ವಸಂತ್ ಜೊತೆ ಮುಂಜಾನೆ ೩ರ ವೇಳೆ ಜಾಗ್ವಾರ್ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದು ಕಾರು ಚಲಾಯಿಸುತ್ತಿದ್ದ ಲೋಕೇಶ್ ವಸಂತ್ ವೇಗವಾಗಿ ಹೋಗುತ್ತಾ ವಸಂತನಗರದ ರೈಲ್ವೆ ಕೆಳ ಸೇತುವೆ ರಸ್ತೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಮುಂಭಾಗ ಸಂಪೂರ್ಣ ಜಖಂಗೊಂಡು ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತ ಲೋಕೇಶ್ ವಸಂತ್ ಗಾಯಗೊಂಡಿದ್ದಾರೆ ಅಪಘಾತದ ನಂತರ ಶರ್ಮಿಳಾ ಮಾಂಡ್ರೆ ಜಯನಗರ, ಜೆಪಿನಗರ ಬಳಿ ಅಪಘಾತ ನಡೆದಿದೆ ಎಂದು ನಾಟಕ ಮಾಡಲು ಮುಂದಾಗಿದ್ದು ಸ್ಥಳಕ್ಕೆ ಧಾವಿಸಿದ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದಾಗ ವರಸೆ ಬದಲಿಸಿದ್ದಾರೆ.
ನಟಿ ಶರ್ಮಿಳಾ ಮಾಂಡ್ರೆ ಅವರು ಸ್ನೇಹಿತ ಲೋಕೇಶ್ ವಸಂತ್ ಇಬ್ಬರು ಮದ್ಯಪಾನ ಮಾಡಿದ್ದ ಶಂಕೆಯಿದ್ದು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಾರಾಯಣ್ ತಿಳಿಸಿದ್ದಾರೆ.

Leave a Comment