ಲಾಡ್ಜ್ ಹಿಂಭಾಗ ಯುವತಿ ನಿಗೂಢ ಸಾವು ಪ್ರಿಯಕರ ಸಹಿತ ಹಲವರ ವಿಚಾರಣೆ

ಹಾಸನ, ಅ.೨೧- ೧೮ ವರ್ಷದಲ್ಲೇ ತನ್ನ ಪ್ರೀತಿಯ ವಿಚಾರದಲ್ಲಿ ಹೆತ್ತವರ ಜೊತೆ ಜಗಳ ಮಾಡಿಕೊಂಡು ಮನೆ ತೊರೆದಿದ್ದ ಭವಿತಾ(೨೩) ನಿನ್ನೆ ತಾನು ವಾಸ್ತವ್ಯವಿದ್ದ ನಗರದ ಲಾಡ್ಜ್ ಹಿಂಭಾಗ ಶವವಾಗಿ ಪತ್ತೆಯಾಗಿದ್ದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ನಗರ ಠಾಣಾ ಪೊಲೀಸರು ಆಕೆಯ ಪ್ರಿಯಕರ ಸಹಿತ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸರಯೂ ಲಾಡ್ಜ್ ಹಿಂಭಾಗ ಭವಿತಾಳ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆ ಸ್ಥಳೀಯರಲ್ಲಿದೆ.

ಭವಿತಾ ಮೂಲತಃ ಅರಕಲಗೂಡಿನವಳಾಗಿದ್ದು ಕಳೆದ ೧೨ ದಿನಗಳಿಂದ ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಳು. ೧೮ ವರ್ಷದಲ್ಲೇ ಮನೆ ಬಿಟ್ಟಿದ್ದ ಆಕೆಯನ್ನು ಪೊಲೀಸರು ಹುಡುಕಿ ಹೆತ್ತವರಿಗೆ ಒಪ್ಪಿಸಿದ್ದರೂ ಆಕೆ ಅವರೊಡನೆ ಇರಲು ಇಚ್ಛಿಸಿರಲಿಲ್ಲ. ಅಂದಿನಿಂದ ಪೋಷಕರು ಕೂಡ ಆಕೆಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಆಕೆ ತನ್ನ ವಿದ್ಯಾಭ್ಯಾಸವನ್ನು ಕೂಡಾ ಮುಂದುವರಿಸಲಿಲ್ಲ ಎಂದು ತಿಳಿದುಬಂದಿದೆ.

ತನಿಖೆ ವೇಳೆ ಆಕೆಗೆ ಮೂವರು ಪ್ರಿಯಕರಿದ್ದರು ಎನ್ನುವ ವಿಚಾರ ತಿಳಿದುಬಂದಿದೆ. ಕೈ ಹಾಗೂ ದೇಹದಲ್ಲಿ ‘ಪುನೀತ್’ ಎಂಬ ಹಚ್ಚೆ ಇದೆ. ಶನಿವಾರ ರಾತ್ರಿ ಪುನೀತ್ ಆಕೆ ಇದ್ದ ರೂಂಗೆ ಬಂದಿದ್ದಾನೆ ಎಂದು ತಿಳಿದುಬಂದಿದ್ದು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಪುನಿತ್ ಕೊಲೆ ಮಾಡಿದ್ದಾನೆಯೇ ಎಂದು ತಿಳಿದು ಬಂದಿಲ್ಲ. ಪುನಿತ್ ಹಾಗೂ ಇತರ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Comment