ಲಾಡ್ಜ್ ಮ್ಯಾನೇಜರ್ ಕೊಲೆ: ಚುರುಕುಗೊಂಡ ತನಿಖೆ

 

ಕಲಬುರಗಿ,ಜ.11-ನಗರದ ಕೇಂದ್ರ ಬಸ್ ನಿಲ್ದಾಣ ಮುಂದಿನ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಲಾಡ್ಜ್ ಮ್ಯಾನೇಜರ್ ಮೇಳಕುಂದಾ (ಬಿ) ಗ್ರಾಮದ ಮಲ್ಲಿಕಾರ್ಜುನ ಅವರ ಕೊಲೆಗೆ ಹಣಕಾಸಿನ ವಿಷಯವೇ ಮೂಲ ಕಾರಣ ಎಂದು ತಿಳಿದುಬಂದಿದೆ.

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗುರುವಾರ ಬೆಳಗ್ಗೆ ಮಲ್ಲಿಕಾರ್ಜುನ ಅವರು ಕೇಂದ್ರ ಬಸ್ ನಿಲ್ದಾಣ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಮನಬಂದಂತೆ ತಿವಿದು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದರು.

ನಿತ್ಯ ನೂರಾರು ಜನ, ವಾಹನಗಳು ಓಡಾಡುವ ಜನನಿಬಿಡ ರಸ್ತೆಯಲ್ಲಿಯೇ ಹಾಡು ಹಗಲೇ ನಡೆದ ಈ ಕೊಲೆ ಪ್ರಕರಣ ಜನ ಬೆಚ್ಚಿ ಬೀಳುವಂತೆ ಮಾಡಿತ್ತು.

ಬಸ್ ನಿಲ್ದಾಣ ಸುತ್ತಲ್ಲಿನ ಕೆಲ ಕಟ್ಟಡಗಳಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಕ್ಯಾಮೆರಾಗಳಲ್ಲಿ ಕೊಲೆ ದೃಶ್ಯ ಸೆರೆಯಾಗಿದ್ದು, ಈ ದೃಶ್ಯಾವಳಿಯನ್ನು ಆಧರಿಸಿ ಕೊಲೆ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಈ ತಂಡ ತನಿಖೆ ನಡೆಸಿ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಿದೆ ಎಂದು ಎಸ್ಪಿ ಎನ್.ಶಶಿಕುಮಾರ ತಿಳಿಸಿದ್ದಾರೆ.

Leave a Comment