ಲಾಕ್ ಡೌನ್ ಸಡಿಲ ಸಾಧ್ಯತೆ

ನವದೆಹಲಿ, ಏ. ೬- ಕೊರೊನಾ ಮಹಾಮಾರಿ ಸೋಂಕಿತ ಪ್ರಕರಣಗಳು ವರದಿಯಾಗದಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧವನ್ನು ಮೊದಲ ಹಂತದಲ್ಲಿ ಸಡಿಲಗೊಳಿಸುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ.

ಮಾರ್ಚ್ 25 ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಲಾಕ್ ಡೌನ್ ಅವಧಿ ಇದೇ 14ಕ್ಕೆ ಮುಗಿಯಲಿದ್ದು, ಏ. 15 ರಿಂದ ಸೋಂಕುರಹಿತ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳೊಂದಿಗೆ ”ಸಮಾಲೋಚನಾ ತಂತ್ರ”ದಲ್ಲಿ ತೊಡಗಿದೆ. ದೇಶದ ಒಟ್ಟು 718 ಜಿಲ್ಲೆಗಳ ಪೈಕಿ 274 ಜಿಲ್ಲೆಗಳಲ್ಲಿ ನಿನ್ನೆವರೆಗೆ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ವಿವಿಧ 9 ರಾಜ್ಯಗಳ, 230 ಜಿಲ್ಲೆಗಳ ಪೈಕಿ 21 ಜಿಲ್ಲೆಗಳು ಹಾಟ್ ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ನಿಯಮಗಳನ್ನು ಸಡಿಲಗೊಳಿಸಿ ಜನರ ಓಡಾಟ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಕುರಿತು, ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಹೇಳಿದ್ದಾರೆ.

ಲವ ಅಗರ್‌‌ವಾಲ್ ಅವರು, ಇಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಅಧಿಕಾರಿಗಳು ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂದು ತಿಳಿಸಿದರು.

ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಕಳೆದ ಗುರುವಾರ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಹಂತಹಂತವಾಗಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿದ್ದರು.

ರಾಜಸ್ತಾನ, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಅಧಿಕಾರಿಗಳು ಸೋಂಕು ರಹಿತ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ಒಲವು ತೋರಿದ್ದಾರೆ.

ಕೊರೊನಾ ಸೋಂಕಿತ ಜಿಲ್ಲೆಗಳಿಂದ ಜನರು, ಈ ರಾಜ್ಯಗಳಿಗೆ ಬರದಂತೆ, ನಿರ್ಬಂಧ ಹೇರುವ ಬಗ್ಗೆ ರಾಜಸ್ತಾನದ ಹಿರಿಯ ಅಧಿಕಾರಿಯೊಬ್ಬರು ಸಲಹೆ ಮಾಡಿದ್ದಾರೆ. ಎರಡನೇ ಹಂತದಲ್ಲಿ ಕೆಲವೇ ರೋಗಿಗಳು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ನಿಯಮಗಳನ್ನು ಸಡಿಲಗೊಳಿಸುವುದು, ಆ ನಂತರ, ಉಳಿದ ಜಿಲ್ಲೆಗಳಿಗೂ ಲಾಕ್ ಡೌನ್ ಸಡಿಲಗೊಳಿಸುವ ನಿರ್ಧಾರವನ್ನು ಕೈಗೊಳ್ಳಬಹುದೆಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಸಮಾವೇಶ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಅನಗತ್ಯವಾಗಿ ಸಾರ್ವಜನಿಕರು ಗುಂಪು ಸೇರುವುದನ್ನು ತಡೆಯುವುದರ ಜೊತೆಗೆ, ಮಾಲ್‌ಗಳು, ಚಲನಚಿತ್ರ ಮಂದಿರಗಳು, ಶೈಕ್ಷಣಿಕ ಸಂಸ್ಥೆಗಳ ಪ್ರಾರಂಭಕ್ಕೆ ಅವಕಾಶ ನೀಡದೆ, ಇನ್ನೂ ಕೆಲವು ದಿನ ಕಾಯುವುದು ಒಳ್ಳೆಯದೆಂಬ ಅಭಿಪ್ರಾಯವನ್ನು ಈ ಅಧಿಕಾರಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಹರಿಯಾಣದ ಅಧಿಕಾರಿಯೊಬ್ಬರು, ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜ್ಯದ 22 ಜಿಲ್ಲೆಗಳ ಪೈಕಿ 14 ಜಿಲ್ಲೆಗಳಲ್ಲಿ ಹಲವು ಸೋಂಕು ಪ್ರಕರಣಗಳು ವರದಿಯಾಗಿರುವುದರಿಂದ ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ. ಮುಂದಿನ ಹತ್ತು ದಿನಗಳ ನಂತರ, ಪರಿಸ್ಥಿತಿಯನ್ನು ಅವಲೋಕಿಸಿ, ತೀರ್ಮಾನ ಕೈಗೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಏ. 14ರ ನಂತರವೂ, ಇನ್ನೂ ಕೆಲವು ವಾರಗಳ ಕಾಲ ಲಾಕ್ ಡೌನ್ ಜಾರಿಯಲ್ಲಿರಬೇಕು ಎಂಬ ಅಭಿಪ್ರಾಯವನ್ನು ಅಲ್ಲಿನ ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿ ಏ. 14ರ ನಂತರವೂ ಲಾಕ್ ಡೌನ್ ಜಾರಿಯಲ್ಲಿರುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದರಿಂದ ಲಾಕ್ ಡೌನ್ ಮುಂದುವರಿಕೆ ಅಗತ್ಯ. ವಿಶೇಷವಾಗಿ ಮುಂಬೈನ ಧಾರಾವಿ ಪ್ರದೇಶದಲ್ಲಿ ಇದು ಅತ್ಯಗತ್ಯ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 47 ಜಿಲ್ಲೆಗಳಲ್ಲಿ ಕೋವಿಡ್ – 19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಸಾಮುದಾಯಿಕ ಸೋಂಕು ಹರಡುವ ಭೀತಿ ಕಂಡುಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲೂ ಮೂರು ಹಂತದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸುವ ವಿಚಾರವನ್ನು ಅಧಿಕಾರಿಗಳು ಸಭೆಯ ಮುಂದಿಟ್ಟಿದ್ದಾರೆ. ನಗರ ಪ್ರದೇಶಗಳಿಗೆ ಬಹಳ ದೂರವಿರುವ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆ ಸೇರಿದಂತೆ, ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಬಹುದಾಗಿದೆ ಎಂದೂ ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.

Leave a Comment