ಲಾಕ್ ಡೌನ್:ಸುಖಾಸುಮ್ಮನೆ ಓಡಾಡಿದವರಿಗೆ ಬೆತ್ತದ ರುಚಿ

ಕಲಬುರ್ಗಿ,ಮಾ.26-ಮಾರಕ ಕೊರೊನಾ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಇಡೀ ರಾಷ್ಟ್ರಾದ್ಯಂತ ಲಾಕ್‍ಡೌನ್‍ಗೆ ಮಾಡಿದ ಮನವಿಗೆ ಜಿಲ್ಲೆಯ ಜನರು ವ್ಯಾಪಕವಾಗಿ ಬೆಂಬಲಿಸಿದ್ದು, ಬುಧವಾರ ಇಡೀ ನಗರವು ಲಾಕ್‍ಡೌನ್ ಆಗಿದ್ದು ಕಂಡುಬಂತು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕಫ್ರ್ಯೂ ಜಾರಿ ಮಾಡಿದಾಗ ನಗರದಲ್ಲಿ ಅಷ್ಟೊಂದು ಜನರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜನಜಂಗುಳಿ ಸೇರಿತ್ತು. ರಾಜ್ಯ ಸರ್ಕಾರವು ಅದೇ ರೀತಿಯ ಜನತಾ ಕಫ್ರ್ಯೂವನ್ನು ಮರುದಿನವೂ ಜಾರಿಗೊಳಿಸಿದಾಗಲೂ ಸಹ ಜನರು ಸ್ಪಂದಿಸಲಿಲ್ಲ. ಹೀಗಾಗಿ ಪೋಲಿಸರು ಕಣ್ಣಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಲಾರಿ ಪ್ರಹಾರದ ಮೂಲಕ ಚದುರಿಸಿದ್ದರು.

ಈ ಎಲ್ಲ ಘಟನೆಗಳಿಂದಾಗಿ ಜಿಲ್ಲಾಧಿಕಾರಿ ಶರತ್ ಬಿ., ಅವರು ಜಿಲ್ಲೆಯ ಜನರು ಕೊರೋನಾ ಮಾರಕ ಸೋಂಕನ್ನು ಗಂಭೀರವಾಗಿ ಪರಿಗಣಿಸದೇ ಇರುವ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಮರುದಿನದಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವುದಾಗಿ ಎಚ್ಚರಿಸಿದರು.

ಅಂದುಕೊಂಡಂತೆ ಬುಧವಾರ ನಗರದಲ್ಲಿ ಬಹುತೇಕ ಎಲ್ಲ ಖಾಸಗಿ ವಾಹನಗಳ ಸಂಚಾರವೂ ಸ್ಥಗಿತಗೊಂಡಿತ್ತು. ಆಟೋಗಳ ಓಡಾಟವೂ ಇರಲಿಲ್ಲ. ದ್ವಿಚಕ್ರವಾಹನ ಸವಾರರ ಸಂಚಾರ ವಿರಳವಾಗಿತ್ತು. ಅಗತ್ಯ ಕೆಲಸಗಳಿಗೆ ಹೋಗುವವರಿಗೆ ಮಾತ್ರ ಪೋಲಿಸರು ಯಾವುದೇ ರೀತಿಯ ತೊಂದರೆ ಕೊಡಲಿಲ್ಲ.

ನಗರದಲ್ಲಿನ ಸೂಪರ್ ಮಾರ್ಕೆಟ್, ಜಗತ್ ವೃತ್ತ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಗಂಜ್ ಮಾರುಕಟ್ಟೆ, ಆಳಂದ್ ನಾಕಾ, ಕೇಂದ್ರೀಯ ಬಸ್ ನಿಲ್ದಾಣ, ಎಂಎಸ್‍ಕೆ ಮಿಲ್ ಪ್ರದೇಶ, ರಾಮ ಮಂದಿರ ವೃತ್ತ, ಹುಮ್ನಾಬಾದ್ ಬೇಸ್ ಮುಂತಾದ ಸ್ಥಳಗಳಲ್ಲಿನ ಅಂಗಡಿ ಹಾಗೂ ಮುಂಗಟ್ಟುಗಳು ಮುಚ್ಚಿದ್ದವು. ಹೀಗಾಗಿ ಇಡೀ ನಗರವು ಜನರಿಲ್ಲದೇ ಬಿಕೋ ಎನ್ನುತ್ತಿತ್ತು.

ಪ್ರಮುಖ ವೃತ್ತಗಳಲ್ಲಿ ಪೋಲಿಸರು ಸುಗಮ ಸಂಚಾರವನ್ನು ತಡೆಹಿಡಿಯಲು ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿದ್ದರು. ಪೋಲಿಸರೂ ಸಹ ನಗರದ ಆಯ್ದ ವೃತ್ತಗಳಲ್ಲಿ ಅಲ್ಲಲ್ಲಿ ಕಂಡುಬಂದರು. ಅಲ್ಲೊಂದು, ಇಲ್ಲೊಂದು ಔಷಧಿ ಅಂಗಡಿ ಹಾಗೂ ಕಿರಾಣಿ ಅಂಗಡಿಗಳು ಆರಂಭಗೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿವು. ಹೀಗಾಗಿ ಕಿರಾಣಿ, ತರಕಾರಿಗಳನ್ನು ಕೊಳ್ಳುವವರು ಹಾಗೂ ಆರೋಗ್ಯ ತಪಾಸಣೆಗಾಗಿ ಹಲವಾರು ಜನರು ರಸ್ತೆಗಳಲ್ಲಿ ಕಾಣಿಸಿಕೊಂಡರು. ಬಹುತೇಕ ನಗರದೊಳಗೆ ಅನಗತ್ಯವಾಗಿ ಸಂಚರಿಸುವವರ ಸಂಖ್ಯೆ ಕಂಡುಬರಲಿಲ್ಲ.

ಆದಾಗ್ಯೂ, ನಗರದ ಲಾಲ್‍ಗಿರಿ ಕ್ರಾಸ್‍ನಲ್ಲಿ ಅನಗತ್ಯವಾಗಿ ದ್ವಿಚಕ್ರವಾಹನ ಹಾಗೂ ಕಾರು ಮತ್ತು ಆಟೋಗಳಲ್ಲಿ ಸಂಚರಿಸುವವರನ್ನು ಕಂಡು ಪೋಲಿಸರು ಲಾಠಿ ಪ್ರಹಾರ ಮಾಡಿದರು. ಅದೇ ರೀತಿ ಕಿರಾಣಾ ಬಜಾರ್, ಮುಸ್ಲಿಂ ಚೌಕ್, ಆಳಂದ್ ನಾಕಾ, ಶಹಾಬಜಾರ್ ನಾಕಾ ಮುಂತಾದ ಕಡೆಗಳಲ್ಲಿಯೂ ಸಹ ಅನಗತ್ಯ ವಾಹನ ಸವಾರರು ಸಂಚರಿಸುವುದು ಕಂಡುಬಂತು. ಹಾಗಾಗಿ ಪೋಲಿಸರು ಅಂಥವರನ್ನು ಪತ್ತೆ ಹಚ್ಚಿ ಅವರಿಗೆ ಬೆತ್ತದ ರುಚಿ ಮುಟ್ಟಿಸಿದರು. ಕೆಲ ಗಲ್ಲಿಯಲ್ಲಿಯೂ ಸಹ ಅನಗತ್ಯವಾಗಿ ತಿರುಗಾಡುವವರ ಮೇಲೂ ಪೋಲಿಸರು ಮಫ್ತಿನಲ್ಲಿ ಬಂದು ಲಾಠಿ ಪ್ರಹಾರ ಮಾಡಿದರು.

ವ್ಯಕ್ತಿಯೊಬ್ಬ ಯುವತಿಯೊಂದಿಗೆ ದ್ವಿಚಕ್ರವಾಹನದಲ್ಲಿ ಬಂದದನ್ನು ತಡೆದ ಪೋಲಿಸರು ಆತನಿಗೆ ತಮ್ಮ ವಾಹನದ ಹಿಂದುಗಡೆ ಯುವತಿಗೆ ಕಾಣಲಾರದ ಹಾಗೆ ಕರೆದುಕೊಂಡು ಹೋಗಿ ಬೆತ್ತದ ರುಚಿ ತೋರಿಸಿ ಕಳಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಗಮನಸೆಳೆಯಿತು.

ಅದೇ ರೀತಿ ಎರಡು ಲಾರಿಗಳಲ್ಲಿ ಸುಮಾರು 100ಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಿರುವುದನ್ನು ಮನಗಂಡ ಪೋಲಿಸರು ಚಾಲಕನಿಗೆ ಲಾಠಿ ಏಟು ಕೊಟ್ಟು ಕಳಿಸಿದರು.

@12bc =ಯುವಕರಿಗೆ ಬಸ್ಕಿ ಹೊಡೆವ ಶಿಕ್ಷೆ

ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಓಡಾಟ, ಬಸ್ಕಿ ಶಿಕ್ಷೆ ನೀಡಿದ್ದನ್ನು ನೋಡಿದ್ದೇವೆ. ಆದಾಗ್ಯೂ, ಕೊರೋನಾ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳವರೆಗೆ ಇಡೀ ರಾಷ್ಟ್ರದಲ್ಲಿ ಲಾಕ್‍ಡೌನ್‍ಗೆ ಆದೇಶಿಸಿದ್ದು, ಆ ಆದೇಶವನ್ನು ಕಡೆಗಣಿಸಿ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವಕರ ತಂಡಕ್ಕೆ ಪೋಲಿಸರು ನಡು ರಸ್ತೆಯಲ್ಲಿಯೇ ಬಸ್ಕಿ ಹೊಡೆಸುವ ಶಿಕ್ಷೆಯನ್ನು ವಿಧಿಸಿದ ರು.

ನಗರದ ಶಹಾಬಜಾರ್ ಚೆಕ್‍ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಅನಗತ್ಯವಾಗಿ ರಸ್ತೆಗಿಳಿದಿದ್ದ ದ್ವಿಚಕ್ರವಾಹನ ಸವಾರರನ್ನು ಹಿಡಿದು ಚೌಕ್ ಠಾಣೆಯ ಪೋಲಿಸರು ಈ ಶಿಕ್ಷೆಯನ್ನು ವಿಧಿಸಿದರು. ಅಷ್ಟೇ ಅಲ್ಲದೇ ಆ ಯುವಕರಿಗೆ ಲಾಕ್‍ಡೌನ್ ಕುರಿತು ತಿಳಿಹೇಳಿ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ಆ ಯುವಕರಿಗೆ ಪೋಲಿಸರು ನಾವು ಕರ್ನಾಟಕ ರಾಜ್ಯದ ಜನತೆ ಪ್ರತಿಜ್ಞೆ ಮಾಡುವುದೇನೆಂದರೆ ನಾವು ಸರ್ಕಾರದ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಬರೋದಿಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ನೀಡಿದ ಆದೇಶ ಪಾಲನೆ ಮಾಡುತ್ತೇವೆ ಹಾಗೂ ಕೊರೋನಾ ವೈರಸ್ ವಿರುದ್ಧ ನಾವೆಲ್ಲರೂ ಹೋರಾಟ ಮಾಡುತ್ತೇವೆ. ನಾವು ನಮ್ಮ ಮನೆ ಮತ್ತು ಸುತ್ತಮುತ್ತ ಕೊರೋನಾ ಸೋಂಕು ಕುರಿತು ಜಾಗೃತಿ ಮೂಡಿಸುತ್ತೇವೆ ಎಂದು ಪಿಐ ಶಕೀಲ್ ಅಂಗಡಿ ಅವರು ಪ್ರತಿಜ್ಞೆ ಮಾಡಿಸಿದರು..

Leave a Comment