ಲಾಕ್‍ಡೌನ್‍ನಲ್ಲೂ ಕೃಷಿ ಯಂತ್ರಧಾರೆಯಿಂದ ರೈತರಿಗೆ ನೆರವು

ಹುಳಿಯಾರು, ಮೇ ೨೫- ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ರೂಪಿಸಲ್ಪಟ್ಟ ಕೃಷಿ ಯಂತ್ರಧಾರೆ ಲಾಕ್‍ಡೌನ್ ಸಂದರ್ಭದಲ್ಲಿ ರೈತರ ನೆರವಿಗೆ ಬಂದಿರುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಯೋಜನಾಧಿಕಾರಿಗಳಾದ ಪ್ರಶಾಂತ್ ತಿಳಿಸಿದ್ದಾರೆ.

ಹಂದನಕೆರೆ ಹೋಬಳಿಯ ಅಂಕಸಂದ್ರ ಗ್ರಾಮದಲ್ಲಿ ಕೃಷಿ ಯಂತ್ರಧಾರೆಯ ಮೇವು ಕತ್ತರಿಸುವ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳಿಂದಲೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆಯಲ್ಲಿ ಕೃಷಿ ಯಂತ್ರಧಾರೆಯು ನಿರಂತರವಾಗಿ ಸೇವೆ ನೀಡುತ್ತಾ ಬಂದಿದ್ದು ಇದುವರೆಗೂ 3 ಸಾವಿರಕ್ಕೂ ಅಧಿಕ ರೈತರು ಕೃಷಿಯಲ್ಲಿನ ಯಂತ್ರೋಪಕರಣಗಳ ಉಪಯೋಗ ಮಾಡಿಕೊಂಡಿರುತ್ತಾರೆ. ಇದರಿಂದಾಗಿ ನಮ್ಮ ಕೇಂದ್ರದಲ್ಲಿ ಸ್ಥಳೀಯವಾಗಿ ಇರುವ ದರಕ್ಕಿಂತಲೂ ಶೇ. 20 ರಷ್ಟು ಕಡಿಮೆ ದರದಲ್ಲಿ ರೈತರಿಗೆ ಯಂತ್ರೋಪಕರಣಗಳನ್ನು ನೀಡುತ್ತಿರುವುದರಿಂದ ಸಾಕಷ್ಟು ಹಣ ರೈತರಿಗೆ ಉಳಿತಾಯವಾಗಲಿದೆ ಎಂದರು.

ಲಾಕ್‌ಡೌನ್ ಸಮಯದ 2 ತಿಂಗಳಲ್ಲಿ ಸಾಕಷ್ಟು ಜನರು ಕೃಷಿ ಯಂತ್ರಧಾರೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಹಂದನಕೆರೆ ಹೋಬಳಿಯಲ್ಲಿ ರೈತರು ಭೂಮಿ ಸಿದ್ಧತೆ ಉಪಕರಣಗಳಾದ ಟ್ರ್ಯಾಕ್ಟರ್ ನೇಗಿಲು, ಕಲ್ಟಿವೇಟರ್, ಬಿತ್ತನೆ ಕೂರಿಗೆ, ಗರಿ ಕತ್ತರಿಸುವ ಯಂತ್ರ ಹಾಗೂ ಸಸಿಗಳಿಗೆ ಗುಂಡಿ ತೆಗೆಯುವ ಯಂತ್ರ ಮುಂತಾದ ಉಪಕರಣಗಳ ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಲಾಕ್‍ಡೌನ್‍ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಕೃಷಿಯಂತ್ರಧಾರೆ ಕೆಲಸ ನಿರ್ವಹಿಸುತ್ತಿರುವುದು ರೈತರಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೆಶಕರಾದ ದಿನೇಶ್ ಪೂಜಾರಿ, ಸಿ.ಎಚ್.ಎಸ್.ಸಿ ಪ್ರಬಂಧಕ ಚೇತನ್‌ಕುಮಾರ್, ಚಾಲಕರಾದ ಚನ್ನಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Share

Leave a Comment