ಲಾಕ್‌ಡೌನ್ ಬಹುತೇಕ ಯಶಸ್ವಿ: ಅನಗತ್ಯ ಓಡಾಟ ಪೊಲೀಸರ ಲಾಠಿ ಪ್ರಹಾರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಬೆಂಗಳೂರು, ಮೇ ೨೪- ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸರ್ಕಾರ, 4ನೇ ಹಂತದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿ ಸೋಂಕು ನಿಯಂತ್ರಣಕ್ಕೆ ಭಾನುವಾರ ಒಂದು ದಿನ ರಾಜ್ಯಾದ್ಯಂತ ಜಾರಿಗೊಳಿಸಿರುವ ಕರ್ಫ್ಯೂ, ಬಹುತೇಕ ಯಶಸ್ವಿಯಾಗಿದೆ.

  • ಭಾನುವಾರ ಲಾಕ್‌ಡೌನ್ ಯಶಸ್ವಿ.
  • ಅನಗತ್ಯ ಸಂಚಾರ ಪೊಲೀಸರಿಂದ ಲಾಠಿಚಾರ್ಜ್.
  • ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಾಗರಿಕರ ಪರದಾಟ.
  • ಬಹುತೇಕ ರಸ್ತೆಗಳು ಖಾಲಿ ಖಾಲಿ.
  • ವಾಣಿಜ್ಯ ವಹಿವಾಟು ಸಂಪೂರ್ಣ ಸ್ತಬ್ಧ.
  • ಮಾಂಸ ಖರೀದಿಗೆ ಮುಗಿಬಿದ್ದ ಜನ.

ವಾರಾಂತ್ಯದಲ್ಲಿ ಸಹಜವಾಗಿ ಜನರ ಓಡಾಟ ಹೆಚ್ಚಾಗಿರಲಿದೆ. ಇದರಿಂದ ಕೊರೊನಾ ಸೋಂಕು ಪ್ರಕರಣಗಳು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಖಾಸಗಿ ವಾಹನಗಳ ಸಂಚಾರ ತೀವ್ರ ವಿರಳವಾಗಿತ್ತು. ಅಲ್ಲೊಂದು ಇಲ್ಲೊಂದು ಬಸ್ ಸಂಚಾರಿಸುತ್ತಿತ್ತು. ಇದು ಅಗತ್ಯ ಸೇವೆಗಳಿಗೆ ಮಾತ್ರ ಸೀಮಿತವಾಗಿತ್ತು. ಹೊರ ಊರುಗಳಿಂದ ಬಂದವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಮ್ಮ ಲಗೇಜ್‌ಗಳೊಂದಿಗೆ ಆಗಮಿಸಿದ್ದರು. ಆದರೆ, ಬೆಂಗಳೂರಿನ ವಿವಿಧ ಭಾಗಗಳಿಗೆ ತೆರಳಲು ಸಾಧ್ಯವಾಗದೆ ಪರದಾಡುವಂತಾಯಿತು.

ಆಟೋಗಳ ಸಂಚಾರ ವಿರಳವಾಗಿತ್ತು. ಸಾರ್ವಜನಿಕರು ತಮ್ಮ ಕುಟುಂಬ ಸದಸ್ಯರ ಜತೆ ನಡೆದುಕೊಂಡೇ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಬೆಂಗಳೂರು, ತುಮಕೂರು, ಮೈಸೂರು, ಶಿವಮೊಗ್ಗ, ಹಾಸನ, ಚಾಮರಾಜನಗರ, ಕೊಡಗು, ಮಂಡ್ಯ, ಹುಬ್ಬಳ್ಳಿ, ದಾವಣಗೆರೆ, ಯಾದಗಿರಿ, ವಿಜಯಪುರ, ಗುಲ್ಬರ್ಗಾ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದಿನ ಲಾಕ್‌ಡೌನ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೆಡೆ ಅಂಗಡಿ-ಮುಂಗಟ್ಟು, ಬಸ್ ಸಂಚಾರ, ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ತಬ್ದಗೊಳಿಸಲಾಗಿದೆ. ಆದರೂ ಜನರ ಓಡಾಟ ಮಾತ್ರ ನಿಂತಿಲ್ಲ.

ಲಾಕ್‌ಡೌನ್ ಜಾರಿಯಲ್ಲಿದ್ದರೂ ರಾಯಚೂರಿನಲ್ಲಿ ಜನರು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದರು. ಇದರಿಂದ ಗರಂ ಆದ ಪೊಲೀಸರು, ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೆ ಲಾಠಿಪ್ರಹಾರ ನಡೆಸಿದರು.
ಬೆಂಗಳೂರಿನ ಅತ್ತಿಬೆಲೆಯಲ್ಲಿ ಅನಗತ್ಯವಾಗಿ ರಸ್ತೆಗಳಿದಿದ್ದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಆದರೂ ಯಾವುದಕ್ಕೂ ಜನ ಕ್ಯಾರೆ ಎನ್ನದೆ ಓಡಾಡುತ್ತಿರುವ ದೃಶ್ಯಗಳು ಕಂಡು ಬಂದವು.
ಅದೇ ರೀತಿ ಬೆಂಗಳೂರಿನ ಕೆಲ ಭಾಗಗಳಲ್ಲಿ ಮಾಂಸ, ಮೀನು ಖರೀದಿಗೆ ಜನ ಮುಗಿ ಬಿದ್ದಿದ್ದಾರೆ.

ಪ್ರಮುಖ ವಾಣಿಜ್ಯ ಚಟುವಟಿಕೆಗಳ ಕೇಂದ್ರಗಳಾದ ಚಿಕ್ಕಪೇಟೆ, ಅವಿನ್ಯೂ ರಸ್ತೆ, ಕೆ.ಆರ್. ಮಾರುಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ತಬ್ದಗೊಂಡಿದೆ. ಶಿವಾಜಿ ನಗರ, ಮಹಾಲಕ್ಷ್ಮಿಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜನರ ಓಡಾಟ ಲಾಕ್‌ಡೌನ್ ನಡುವೆಯೂ ಮುಂದುವರೆದಿತ್ತು.

ಜನರು ರಸ್ತೆಗಿಳಿಯುವುದನ್ನು ತಡೆಯಲು ಬ್ಯಾರಿಕೇಡ್‌ ಹಾಕಿ ಪೊಲೀಸರು ಹರಸಾಹಸ ನಡೆಸಿ ಹಲವು ಭಾಗಗಳಲ್ಲಿ ಯಶಸ್ವಿಯಾದರೂ ಕೆಲ ಭಾಗಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದದ್ದು ಕಂಡು ಬಂತು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಹೋಟೆ‌ಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದರೂ ಕೆಲ ಭಾಗಗಳಲ್ಲಿ ಬಾಗಿಲು ಮುಚ್ಚಿಕೊಂಡು ಹೋಟೆಲ್ ನಡೆಸುತ್ತಿದ್ದ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಂಥವರಿಗೆ ಪೊಲೀಸರು ಲಾಠಿ ರುಚಿ ನೀಡಿದ್ದು ಕಂಡು ಬಂತು.
ತಮಿಳುನಾಡು-ಕರ್ನಾಟಕ ಗಡಿ ಭಾಗಗಳಾದ ಅತ್ತಿಬೆಲೆಯಿಂದ ಲಾರಿಗಳಲ್ಲಿ ಬರುತ್ತಿದ್ದ ಜನರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದ್ದಾರೆ. ಬಾಗೇಪಲ್ಲಿಯಿಂದ ಕಾರ್ಮಿಕರನ್ನು ಕರೆದುಕೊಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪರದಾಟ
ದೆಹಲಿ ಸೇರಿದಂತೆ ವಿವಿಧ ಭಾಗಗಳಿಂದ ರೈಲುಗಳ ಮೂಲಕ ಆಗಮಿಸಿದ್ದ ವಲಸೆ ಕಾರ್ಮಿಕರು ತಮ್ಮ ಪ್ರದೇಶಗಳಿಗೆ ತೆರಳಲು ಬಸ್‌ಗಳಿಲ್ಲದೆ ಪರದಾಡಿದ ಪ್ರಸಂಗವೂ ನಡೆದಿದೆ.
ತುಮಕೂರಿನಲ್ಲಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಸಂಪೂರ್ಣ ಬಂದ್ ಆಗಿವೆ. ರಸ್ತೆಗೆ ಯಾವುದೇ ಬಸ್, ಕಾರುಗಳು ಇಳಿಯದ ಹಿನ್ನೆಲೆಯಲ್ಲಿ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು.

ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದು, ಮಾಂಸದ ಅಂಗಡಿಗಳ ಮುಂದೆ ಮಾತ್ರ ಜನ ಸರದಿಯ ಸಾಲಿನಲ್ಲಿ ನಿಂತು ಖರೀದಿಗಾಗಿ ಮುಗ್ಗಿ ಬಿದ್ದಿದ್ದಾರೆ.
ಹಾಸನದಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಜನರ ಓಡಾಟಕ್ಕೆ ನಿರ್ಬಂಧ ಹೇರಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.

ನೆಲಮಂಗಲದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆದಿದೆ. ಲಾಕ್‌ಡೌನ್ ನಡುವೆಯೂ ಬೆಂಗಳೂರು, ಬಾಗಲಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಮದುವೆ ಕಾರ್ಯಕ್ರಮಗಳು ನಡೆದಿವೆ.
ಇನ್ನು ಹಲವು ಕಡೆ ಜನರು ಸಾಮಾಜಿಕ ಅಂತರ ಮರೆತು ಮಾಸ್ಕ್ ಧರಿಸದೆ ಓಡಾಡುತ್ತಿದ್ದುದು ಕಂಡು ಬಂತು. ಇಂದು ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಹಾಗೂ 50 ಕ್ಕಿಂತ ಹೆಚ್ಚು ಜನರು ಭಾಗವಹಿಸದಂತೆ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

 

Share

Leave a Comment