ಲಾಕ್‌ಡೌನ್ ಪರಿಹಾರವಲ್ಲ ಅಗತ್ಯ ಚಿಕಿತ್ಸೆ ಅತ್ಯಗತ್ಯ

ಜಿನಿವಾ, ಮಾ. ೨೬- ಹೆಮ್ಮಾರಿ ಕೊರೊನಾ ವೈರಾಣು ವಿರುದ್ಧ ಹೋರಾಡಲು ದೇಶಗಳನ್ನು ಲಾಕ್‌ಡೌನ್ ಮಾಡಿದರೆ ಪ್ರಯೋಜನವಾಗದು. ಬದಲಾಗಿ ಸೋಂಕಿತರನ್ನು ಪತ್ತೆಹಚ್ಚಿ, ಪ್ರತ್ಯೇಕಗೊಳಿಸಿ, ಪರೀಕ್ಷಿಸಿ, ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇಂದಿಲ್ಲಿ ಹೇಳಿದೆ.
ಕೊರೊನಾ ವೈರಸ್ ನಿರ್ಮೂಲನೆ ಮಾಡಬೇಕಾದರೆ, ಎಲ್ಲರೂ ಒಗ್ಗೂಡಿ, ಹೋರಾ‌ಡುವ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಲಾಕ್‌ಡೌನ್ ಜೊತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟ್ರೇಡ್‌ರೊಸ್ ಅದಾನೋಮ್ ಗೇ ಬ್ರೈಸುಸ್ ಅವರು ತಿಳಿಸಿದ್ದಾರೆ.
ಕೊರೊನಾ ವೈರಾಣುವನ್ನು ಜಗತ್ತಿನಿಂದ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿಶ್ವದ ಅನೇಕ ದೇಶಗಳು ಲಾಕ್‌ಡೌನ್ ಮಾಡಿವೆ. ಇದಿಷ್ಟೇ ಸಾಲದು, ಅದರ ಬದಲಿಗೆ ರೋಗ ನಿರ್ಮೂಲನೆಗೆ ಪರಿಣಾಮಕಾರಿ ಚಿಕಿತ್ಸೆಯೂ ಅತೀ ಅವಶ್ಯ ಎಂದು ತಿಳಿಸಿದ್ದಾರೆ.
ದೇಶಗಳು ಲಾಕ್‌ಡೌನ್ ಮಾಡಿದ್ದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಬದಲಾಗಿ ಸ್ವಯಂ ನಿರ್ಬಂಧವನ್ನು ಜನರು ಹಾಕಿಕೊಳ್ಳುವ ಅಗತ್ಯವಿದೆ. ಹೀಗಾಗಿ ಜನರು ಮನೆಯಲ್ಲೇ ಇರಿ. ಜೊತೆಗೆ ಜನಸಂಖ್ಯೆ ನಿಯಂತ್ರಣಕ್ಕೂ ಒತ್ತು ಕೊಡಿ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಎಂದು ಹೇಳಿರುವ ಅವರು ಸಾಂಕ್ರಾಮಿಕ ರೋಗವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದ್ದಾರೆ.
22 ಸಾವಿರ ಸಾವು
ಜಗತ್ತಿನಾದ್ಯಂತ ಕೊರೊನಾ ವೈರಾಣು ಸೋಂಕಿಗೆ ಇದುವರೆಗೆ ಸರಿಸುಮಾರು 22ಸಾವಿರ ಮಂದಿ ಸಾವನ್ನಪ್ಪಿದ್ದು, 5 ಲಕ್ಷಕ್ಕೂ ಹೆಚ್ಚಿನ ಮಂದಿಗೆ ಸೋಂಕು ತಗುಲಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ವೈರಾಣು ಸೋಂಕನ್ನು ನಿಯಂತ್ರಿಸಲು ಎಲ್ಲರ ಸಹಕಾರ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದ್ದಾರೆ.

Leave a Comment