ಲಾಕ್‌ಡೌನ್ ನಡುವೆ ಮೂರನೇ ಮದುವೆಯಾದ ನಟಿ ವನಿತಾ

ಚೆನ್ನೈ, ಜೂ.೩೦- ಮಹಾಮಾರಿ ಕೊರೊನಾ ಲಾಕ್‌ಡೌನ್ ಆಗಿದ್ದ ವೇಳೆಯೂ ಅನೇಕ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ತಮಿಳಿನ ನಟಿಯೊಬ್ಬರು ಸರಳವಾಗಿ ಮೂರನೇ ಮದುವೆಯಾಗಿದ್ದಾರೆ.

ನಟಿ ವನಿತಾ ವಿಜಯಕುಮಾರ್ ವಿಎಫ್‌ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದಾರೆ. ಜೂನ್ ೨೭ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ವಿವಾಹವಾಗಿದ್ದಾರೆ. ಚೆನ್ನೈನಲ್ಲಿ ಇವರ ವಿವಾಹ ಸಮಾರಂಭ ನಡೆದಿದೆ. ಮದುವೆಯಲ್ಲಿ ಕುಟುಂಬದವರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದು, ಜೋಡಿಗೆ ಶುಭಾಶಯ ಕೋರಿದ್ದಾರೆ. ನಟಿ ವನಿತಾಗೆ ಈಗಾಗಲೇ ಎರಡು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾರೆ. ಇದು ಮೂರನೇ ಮದುವೆಯಾಗಿದೆ. ನಟಿ ವನಿತಾ ೨೦೦೦ ರಲ್ಲಿ ಕಿರುತೆರೆ ನಟ ಆಕಾಶ್ ಜೊತೆಗೆ ಮದುವೆಯಾಗಿದ್ದರು. ಈ ದಂಪತಿಗೆ ಮಗ ವಿಜಯ್ ಶ್ರೀ ಹರಿ ಹಾಗೂ ಮಗಳು ಜೋವಿಕಾ ಮಕ್ಕಳಿದ್ದರು. ಆದರೆ ೨೦೦೭ರಲ್ಲಿ ವನಿತಾ ವಿಚ್ಛೇದನ ಪಡೆದುಕೊಂಡಿದ್ದರು. ಅದೇ ವರ್ಷ ಉದ್ಯಮಿ ಆನಂದ್ ಜಯರಾಜನ್ ಜೊತೆ ಎರಡನೇ ವಿವಾಹವಾಗಿದ್ದರು. ಅವರಿಗೆ ಜಯನಿತಾ ಜನಿಸಿದ್ದರು. ೨೦೧೨ರಲ್ಲಿ ಅವರಿಂದಲೂ ದೂರವಾಗಿದ್ದರು. ಇನ್ನೂ ೨೦೧೩-೨೦೧೭ ರವರೆಗೆ ನಿರ್ದೇಶಕ ರಾಬರ್ಟ್ ಜೊತೆಗೆ ವನಿತಾ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈಗ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದಾರೆ. “ಪೀಟರ್ ಭೇಟಿ ಮಾಡಿದಾಗ ಪ್ರೀತಿಯಲ್ಲಿ ಬಿದ್ದೆ. ಮದುವೆಯಲ್ಲಿ ನನ್ನ ಕೈ ನೀಡುವಂತೆ ಪೀಟರ್ ಕೇಳಿದರು. ಆಗ ನಾನು ಏನು ಉತ್ತರ ಕೊಡದೆ ಮೂಕವಿಸ್ಮಿತಳಾದೆ. ಈ ವೇಳೆ ನನ್ನ ಮಕ್ಕಳು ಇದಕ್ಕೆ ಒಪ್ಪಬೇಕು ಎಂದು ಅವರಿಗೆ ಹೇಳಿದೆ. ನಂತರ ನನ್ನ ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು” ಎಂದು ವನಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ವನಿತಾ ಕಾಲಿವುಡ್‌ನ ಹಿರಿಯ ನಟ ವಿಜಯ್ ಕುಮಾರ್ ಪುತ್ರಿಯಾಗಿದ್ದು, ತಮಿಳು ಮತ್ತು ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ‘ಚಂದ್ರಲೇಖಾ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಹೆಚ್ಚಾಗಿ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮಿಳಿನ ಬಿಗ್‌ಬಾಸ್ ರಿಯಾಲಿಟಿ ಶೋಗೂ ಹೊಗಿದ್ದರು.

ವನಿತಾ ಸಹೋದರ ಅರುಣ್ ವಿಜಯ್ ಕೂಡ ನಟರಾಗಿದ್ದು, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ‘ಚಕ್ರವ್ಯೂಹ’ ಚಿತ್ರದಲ್ಲಿ ನಟಿಸಿದ್ದಾರೆ. ಸಹೋದರಿ ಪ್ರೀತಾ, ಸಾಯಿಕುಮಾರ್ ಜತೆ ‘ಓಂ ನಮಃ ಶಿವಾಯ’ ಚಿತ್ರದಲ್ಲಿ ನಟಿಸಿದ್ದರು. ಇನ್ನೂ ಮತ್ತೊಬ್ಬ ಸಹೋದರಿಯರಾದ ಶ್ರೀದೇವಿ ಅವರು ಶ್ರೀ ಮುರಳಿ ನಿರ್ದೇಶನ ‘ಪ್ರೀತಿಗಾಗಿ’, ಶಿವರಾಜ್ ಕುಮಾರ್ ನಟನೆಯ ‘ಕಾಂಚನಗಂಗಾ’, ರವಿಚಂದ್ರನ್ ನಟನೆಯ ‘ಲಕ್ಷ್ಮಣ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Share

Leave a Comment