ಲಾಕ್‌ಡೌನ್‌ನಿಂದ ಜನಜೀವನ ದುಸ್ತರ- ಮೋದಿಗೆ ಕಮಲ್ ಹಾಸನ್ ಪತ್ರ

ಚೆನ್ನೈ, ಏ. ೭- ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಜೀವನ ದುಸ್ತರವಾಗಿದೆ ಎಂದು ತಮಿಳು ನಟ ಹಾಗೂ ಮಕ್ಕಳ್ ನೀತಿ ಮೈಯಮ್ ಮುಖಂಡ ಕಮಲ್ ಹಾಸನ್ ಅವರು ಮೋದಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಘೋಷಿಸಿರುವ ಲಾಕ್‌ಡೌನ್, ಅಂದುಕೊಂಡಂತೆ ಯೋಜಿತವಾಗಿ ನಡೆಯೋದಿಲ್ಲ, ಇದರ ಪರಿಣಾಮವಾಗಿ ದೇಶದ ಬಡ ಜನರ ಜೀವ ಹಾಗೂ ಜೀವನಾಧಾರ ಎರಡನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊಗಿದೆ ಎಂದು ಅವರು ಮೋದಿಯವರಿಗೆ ಬರೆದ ಬಹಿರಂಗ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

ಇದರೊಂದಿಗೆ ನನಗಿರುವ ದೊಡ್ಡ ಆತಂಕವೆಂದರೆ ನೋಟು ರದ್ದತಿಯ ಪ್ರಮಾದವನ್ನು ಅದೇರೀತಿ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರಲಾಗಿದೆ. ನೋಟು ರದ್ದತಿ ಕಡುಬಡವರ ಉಳಿತಾಯ ಹಾಗೂ ಜೀವನಾಧಾರವನ್ನು ಕಸಿದುಕೊಂಡರೆ, ಸಾಕಷ್ಟು ತಯಾರಿ ಇಲ್ಲದೇ ಘೋಷಿಸಿದ ಲಾಕ್‌ಡೌನ್, ಜೀವಹಾನಿ ಹಾಗೂ ಜೀವನಾಧಾತ ಕಳೆದುಕೊಳ್ಳುವಂಥ ಮಾರಕ ಪರಿಣಾಮಗಳಿಗೆ ಕಾರಣವಾಗುತ್ತಿದೆ ಎಂದು ವಿವರಿಸಿದ್ದಾರೆ.

ಒಂದೆಡೆ ಸೌಲಭ್ಯ ಇರುವವರು ದೀಪ ಬೆಳಗಬೇಕು ಎಂದು ಸೂಚಿಸುತ್ತೀರಿ. ಇನ್ನೊಂದೆಡೆ ಬಡವರ ಭವಿಷ್ಯವೇ ಮಬ್ಬಾಗಿದೆ. ನಿಮ್ಮ ಜಗತ್ತು ಬಾಲ್ಕನಿಗಳಲ್ಲಿ ತೈಲದೀಪಗಳನ್ನು ಬೆಳಗಿದರೆ, ಬಡವರಿಗೆ ತಮ್ಮ ಮುಂದಿನ ರೊಟ್ಟಿ ಬೇಯಿಸಲು ಸಾಕಷ್ಟು ಎಣ್ಣೆಗೂ ಪರದಾಡಬೇಕಾದ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದ್ದಾರೆ. ಸರ್ಕಾರ ಕೇವಲ ಬಾಲ್ಕನಿ ಹೊಂದಿದವರ ಬಗ್ಗೆ ಮಾತ್ರ ಚಿಂತಿಸದೇ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಡವರನ್ನು ಕೂಡಾ ನಿರ್ಲಕ್ಷಿಸಬಾರದು ಎಂದು ಕಮಲ್ ಸಲಹೆ ಮಾಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆಯೂ ಗಮನ ಸೆಳೆದಿದ್ದಾರೆ. ಈಗಾಗಲೇ ಸುಸ್ಥಿತಿಯಲ್ಲಿರುವ ಮಧ್ಯಮವರ್ಗದ ಕೋಟೆಯನ್ನು ಸುರಕ್ಷಿತಗೊಳಿಸಲು, ದಿನಗೂಲಿಗಳು, ಮನೆಗೆಲಸದವರು, ಬೀದಿಬದಿ ವ್ಯಾಪಾರಿಗಳು, ಆಟೊರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಮುಂತಾದ ಅಸಹಾಯಕ ವಲಸೆ ಕಾರ್ಮಿಕರನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

Leave a Comment