ಲವ್ ಮಾಕ್ಟೈಲ್, ದಿಯಾ ಚಿತ್ರ ಮತ್ತೆ ಬಿಡುಗಡೆಗೆ ಒತ್ತಾಯ

 

ಬೆಂಗಳೂರು, ಮಾ 16- ಚಂದನವನದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಲವ್ ಮಾಕ್ಟೈಲ್ ಹಾಗೂ ದಿಯಾ ಚಿತ್ರಗಳ ಬಗ್ಗೆ ಅತ್ಯುತ್ತಮ ವಿಮರ್ಶೆಗಳು ಬಂದಿದ್ದರೂ, ಎರಡು ಚಿತ್ರಗಳು ಚಿತ್ರಮಂದಿರದಲ್ಲಿ ಕಾಣೆಯಾಗಿ ಇದೀಗ ಅಮೆಜಾನ್ ಪ್ರೇಮ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಎರಡು ಚಿತ್ರಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ.

ಹೌದು ಆನ್‌ಲೈನ್‌ನಲ್ಲಿ ಲವ್ ಮಾಕ್ಟೈಲ್ ಹಾಗೂ ದಿಯಾ ಚಿತ್ರಗಳನ್ನು ವೀಕ್ಷಿಸಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಲ್ಲದೇ ಇಂತಹ ಅದ್ಭುತ ಚಿತ್ರಗಳು ಯಾಕೆ ಚಿತ್ರಮಂದಿರದಲ್ಲಿ ಹೆಚ್ಚು ದಿನ ಉಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಈ ಎರಡು ಚಿತ್ರಗಳ ಚರ್ಚೆ ಜೋರಾಗಿ ನಡೆಯುತ್ತಿದ್ದು, ದಯಮಾಡಿ ಚಿತ್ರ ನೋಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡುವ ಪರಿಸ್ಥಿತಿ ಎದುರಾಗಿರುವುದು ವಿಷಾದಕರ ಸಂಗತಿ. ಅಲ್ಲದೇ ಮತ್ತೆ ಈ ಚಿತ್ರಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ ಗೆದ್ದು ಬೀಗಿರುವ ದಿಯಾ ಇತ್ತೀಚೆಗೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಮಾಡಲಾಗಿದೆ. ಆನ್ ಲೈನಲ್ಲಿ ರಿಲೀಸ್ ಆಗುತ್ತಿದ್ದಂತೆ ಪ್ರೇಕ್ಷಕರು ದಿಯಾ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಅಮೆಜಾನ್ ಪ್ರೈಂನಲ್ಲಿ ಚಿತ್ರದ ವೀಕ್ಷಣೆ ಹೆಚ್ಚಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನ್‌ಲೈನ್‌ನಲ್ಲಿ ಸಿನಿಮಾ ಎಲ್ಲರಿಗೂ ತಲುಪುವುದಿಲ್ಲ ಎನ್ನುವ ಕಾರಣಕ್ಕೆ ಮತ್ತೆ ರಿ-ರಿಲೀಸ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೇವೆ, ಹಾಗಾಗಿ ಚಿತ್ರಮಂದಿರಗಳಲ್ಲಿಯೆ ಸಿನಿಮಾ ನೋಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ದಿಯಾದಲ್ಲಿ ನಾಯಕಿ ಖುಷಿ ಪಾತ್ರಕ್ಕೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ, ಇನ್ನು ನಾಯಕರಾಗಿ ದೀಕ್ಷಿತ್ ಮತ್ತು ಪೃಥ್ವಿ ಅಂಬರ್ ಮಿಂಚಿ ಮನಸಿನಲ್ಲಿ ಉಳಿದಿದ್ದಾರೆ. ಲವ್ ಮಾಕ್ಟೈಲ್‌ನ ಡಾರ್ಲಿಂಗ್ ಕೃಷ್ಣ ನಟನೆ ಜನರಿಗೆ ಇನ್ನಷ್ಟು ಇಷ್ಟವಾಗಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತೆ ಆಗ್ರಹಿಸಿದ್ದಾರೆ.

Leave a Comment