`ಲಕ್ಷ್ಮೀ` ಇಲ್ಲದ ಎಟಿಎಂ ಮುಂದೆ ಸಾಲುಗಟ್ಟಿ ಕಂಗಾಲಾದ ನಾಗರೀಕರು

* ಸಾಲು ರಜೆ ಅವಾಂತರ : ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ – ಹಬ್ಬದಲ್ಲಿ ಪರದಾಟ
ರಾಯಚೂರು.ಅ.08- ಭಾರತೀಯ ಪರಂಪರೆಯಲ್ಲಿ ಅತಿ ದೊಡ್ಡ ಎರಡನೇ ಹಬ್ಬವೆಂದೇ ಗುರುತಿಸಿಕೊಂಡ ದಸರಾ ಹಬ್ಬಕ್ಕೆ ಜನರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಗರದಲ್ಲಿ ಬಹುತೇಕ ಎಟಿಎಂಗಳಲ್ಲಿ ಕಂಡು ಬಂದಿದೆ.
ಸಾಲು ರಜೆ, ಬ್ಯಾಂಕ್ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಸರ್ಕಾರಗಳ ಆನ್ ಲೈನ್ ವ್ಯವಹಾರ ಆದ್ಯತೆಗೆ ನಾಗರೀಕರಿಗೂ ಕಾಸಿಲ್ಲದೇ, ಖರೀದಿಗಾಗಿ ಕೈಗಡ ಪಡೆಯುವ ದೀನಾಯ ಸ್ಥಿತಿ ಎದುರಿಸಬೇಕಾಯಿತು. ಕಾರ್ಡ್ ಹಿಡಿದು ಎಟಿಎಂ ಮುಂದೆ ಸಾಲು ನಿಂತವರಿಗೆ `ನೋ ಮನಿ ಅವಲೇಬಲ್` ಎನ್ನುವ ಸಂದೇಶದಿಂದ ಕಂಗಾಲಾಗಿ ಎಟಿಎಂಗಳಿಂದ ಮರಳಬೇಕಾಯಿತು. ಭಾನುವಾರದಿಂದ ಸರದಿ ರಜೆ ಎಟಿಎಂ ಖಾಲಿ… ಖಾಲಿ… ಆಗಿದ್ದರ ಪರಿಣಾಮ ಜನ ಹಬ್ಬದ ಸಂಭ್ರಮಕ್ಕಿಂತ ಹಣ ಪಡೆಯುವ ದಿಗ್ಭ್ರಮೆಯಲ್ಲಿ ಅಲೆಯುವಂತಾಯಿತು.
ದಸರಾ ಹಬ್ಬ ಅನೇಕ ಪೂಜಾ ಪುನಸ್ಕಾರಗಳ ಹಬ್ಬವಾಗಿದೆ. ಸತತ ಎರಡು ದಿನಗಳ ಕಾಲ ಮನೆಯಲ್ಲಿ ವಿವಿಧ ಪೂಜೆ ನೆರವೇರಿಸಲಾಗುತ್ತದೆ. ಸಣ್ಣ ಪುಟ್ಟ ಖರೀದಿ ಈ ಹಬ್ಬದಲ್ಲಿ ಅಧಿಕವಾಗಿರುತ್ತದೆ. ಆನ್ ಲೈನ್ ಖರೀದಿಗಿಂತ ಹಣದ ಮೂಲಕ ಖರೀದಿ ವ್ಯವಹಾರ ನಡೆಯುವುದು ಸಾಮಾನ್ಯ. ಆದರೆ, ಜೇಬಿನಲ್ಲಿ ಹಣವಿಲ್ಲದಿದ್ದರೇ, ಖರೀದಿ ಹೇಗೆ? ಎನ್ನುವ ತಳಮಳ ಜನ ಇಂದು ಅಕ್ಷರಶಃ ಎದುರಿಸಬೇಕಾಯಿತು.
ವಿವಿಧ ಕೆಲಸ ಒತ್ತಡದಲ್ಲಿ, ಎಟಿಎಂಯಿಂದ ಯಾವುದೇ ಸಮಯದಲ್ಲಿ ಹಣ ಪಡೆಯಬಹುದೆಂಬ ವಿಶ್ವಾಸದಲ್ಲಿದ್ದ ಅವರು ನಿನ್ನೆಯಿಂದ ನೂರು ರೂಪಾಯಿಗೂ ಅಲೆದಾಡಿ, ಬಸವಳಿಯಬೇಕಾಯಿತು. ನಗರದಲ್ಲಿರುವ ಬಹುತೇಕ ಎಟಿಎಂಗಳಲ್ಲಿ ಹಣವಿಲ್ಲದ ಕಾರಣ ಜನ `ಮರುಭೂಮಿಯಲ್ಲಿ ಓಯಸೀಸ್`ಯಂತೆ ಯಾವುದೋ ಒಂದು ಎಟಿಎಂನಲ್ಲಿ ಹಣ ದೊರೆಯಬಹುದೆಂದು ಅಲೆಯುವ ಗ್ರಾಹಕರ ಗಾಡಿಯ ಪೆಟ್ರೋಲ್ ಖರ್ಚಾಗುವುದು ಬಿಟ್ಟರೇ, ಹಣ ಮಾತ್ರ ಕೈ ಸೇರದೆ, ಜನ ಅಸಮಾಧಾನಗೊಂಡ ಘಟವೆಗಳಿವೆ.
ರಿಯಾಲಿಟಿ ಚೆಕ್‌ಗಾಗಿ ಸಂಜೆವಾಣಿಯ ಪ್ರತಿನಿಧಿ ನಗರದ ಗಾಂಧಿವೃತ್ತ, ಚಂದ್ರಮೌಳೇಶ್ವರ ವೃತ್ತ, ಮಹಾವೀರ ವೃತ್ತ, ಸ್ಟೇಷನ್ ರಸ್ತೆ, ತಹಶೀಲ್ ಆಫೀಸ್ ಸೇರಿದಂತೆ ಹಲವು ಕಡೆ ಎಟಿಎಂಗಳಲ್ಲಿ ಪರಿಶೀಲಿಸಿದಾಗ ಎಲ್ಲಿಯೂ ಸಹ ಹಣವಿಲ್ಲದೆ ಜನ ಬಂದ ದಾರಿಗೆ ಸುಂಕವಿಲ್ಲ ಎನ್ನುವ ರೀತಿಯಲ್ಲಿ ಮರಳುತ್ತಿರುವುದು ಕಂಡು ಬಂದಿತು. ಹಬ್ಬದ ದಿನಗಳಲ್ಲಿ ಎಟಿಎಂ ದುಸ್ಥಿತಿ ಗ್ರಾಹಕರನ್ನು ತೀವ್ರ ಚಿಂತೆಗೆ ಗುರಿಯಾಗುವಂತೆ ಮಾಡಿತು.
ಬ್ಯಾಂಕ್ ಅಧಿಕಾರಿಗಳು ಸಾಲು ರಜೆ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಸಮರ್ಪಕ ಹಣ ಲಭ್ಯವಾಗುವಂತೆ ಕ್ರಮ ಕೈಗೊಳುವ ಜವಾಬ್ದಾರಿ ನಿರ್ವಹಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್‌ನಲ್ಲಿ ಹಣವಿದ್ದು, ಹಬ್ಬದ ವ್ಯಾಪಾರಕ್ಕಾಗಿ ಮತ್ತೊಬ್ಬರಲ್ಲಿ ಕೈಯೊಡ್ಡುವ ಅಥವಾ ಅಂಗಡಿಗಳಲ್ಲಿ ಬಾಕಿ ಬರೆಸುವ ಅನಿವಾರ್ಯತೆಯಲ್ಲಿ ದಸರಾ ಪೂರ್ಣಗೊಳ್ಳುವಂತಾಗಿದೆ. ನಾಳೆವರೆಗೂ ಎಟಿಎಂ `ನೋ ಮನಿ ಅವಲೇಬಲ್` ಎನ್ನುವ ಪರಿಸ್ಥಿತಿಯಲ್ಲಿರುವುದರಿಂದ ಗ್ರಾಹಕರು ಮತ್ತಷ್ಟು ಚಿಂತೆಗೀಡಾಗುವಂತಾಗಿದೆ.
ಬ್ಯಾಂಕ್ ಅಧಿಕಾರಿಗಳು ಕಾಲ ಕಾಲಕ್ಕೆ ಎಟಿಎಂ ಹಣದ ಸ್ಥಿತಿಗತಿ ಗಮನಿಸಿ, ಗ್ರಾಹಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುವ ಆಸಕ್ತಿ ವಹಿಸದಿರುವುದರಿಂದ ದಸರಾ ಹಬ್ಬದಲ್ಲಿ ಜನ ಸಂಭ್ರಮಕ್ಕಿಂತ ಹಣ ಪಡೆಯಲು ಅಲೆದಾಡಿದ್ದೇ ಹೆಚ್ಚು ಎನ್ನುವಂತಹ ಕಹಿ ಅನುಭವ ಈ ದಸರಾ ಉಳಿಯುವಂತೆ ಮಾಡಿದೆ. ಇಂತಹ ಅನುಭವಗಳಿಂದ ಬ್ಯಾಂಕ್ ಅಧಿಕಾರಿಗಳು ಎಚ್ಚೆತ್ತುಕೊಂಡು ಎಟಿಎಂಗಳಲ್ಲಿ ನಿರಂತರ ಹಣ ದೊರೆಯುವ ವ್ಯವಸ್ಥೆ ಮಾಡಬೇಕು. ಅಲ್ಲದೇ ಗ್ರಾಹಕರು ಸಹ ಸಾಲು ರಜೆ ಸಂದರ್ಭದಲ್ಲಿ ಹೆಚ್ಚಿನ ಹಣ ಬಳಿ ಹೊಂದಲು ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಇಲ್ಲದಿದ್ದರೇ, ಇಂತಹ ಅನಾಹುತ ತಪ್ಪಿದ್ದಲ್ಲ.

Leave a Comment