ಲಂಚ ಪಡೆಯುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಗೌರಿಶಂಕರ್

ತುಮಕೂರು, ಆ. ೨೫-ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕನಾಗಿ ನಾನು ಅಧಿಕಾರದಲ್ಲಿರುವ ಅವಧಿಯವರೆಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಕ್ಷೇತ್ರದ ಜನತೆ ಹಾಗೂ ಬಡವರಿಂದ ಸರ್ಕಾರಿ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡುವುದು ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಖಡಕ್ ಎಚ್ಚರಿಕೆ ನೀಡಿದರು.

ನಗರದ ಹೆಬ್ಬೂರು ಹೋಬಳಿ ಸಿರಿವರ ಗ್ರಾಮ ಪಂಚಾಯ್ತಿಯ ಗೋವಿಂದರಾಜಪುರ ಗ್ರಾಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ರೈತರು, ಬಡವರ ಕಷ್ಟಗಳಿಗೆ ಸಮರ್ಪಕವಾಗಿ ಸ್ಪಂದಿಸಬೇಕು. ಒಂದು ವೇಳೆ ಅಧಿಕಾರಿಗಳಿಂದ ಸಮರ್ಪಕವಾದ ಪ್ರತಿಕ್ರಿಯೆ ದೊರಕದಿದ್ದರೆ ಪ್ರತಿ ಸೋಮವಾರ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಜರುಗುವ ಜನತಾದರ್ಶನ ಕಾರ್ಯಕ್ರಮಕ್ಕೆ ಬಂದು ತಮ್ಮ ಅಹವಾಲುಗಳನ್ನು ನೇರವಾಗಿ ನನಗೆ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಪರಿಹರಿಸುವಂತೆ ಪ್ರಯತ್ನ ಮಾಡುತ್ತೇನೆ. ಯಾವುದೇ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟದ್ದು ನನ್ನ ಗಮನಕ್ಕೆ ತಂದರೆ ಅಂತಹ ಅಧಿಕಾರಿಗಳಿಗೆ ಚಳಿ ಬಿಡಿಸುತ್ತೇನೆ ಎಂದು ಗುಡುಗಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಷ್ಟು ಕೆರೆಗಳಿಗೆ ಏತ ನೀರವಾರಿ ಯೋಜನೆ ಮುಖೇನ ನೀರು ಹರಿಸಲಾಗುತ್ತಿದೆ. ನಾಗವಲ್ಲಿ ಕೆರೆಗೂ ಸಹ ಹೇಮಾವತಿ ನೀರು ಹರಿಯಲಿದೆ. ಸರ್ಕಾರ ನಿಗದಿಪಡಿಸಿರುವ 310 ಎಂ.ಸಿ.ಎಫ್‌.ಟಿ ನೀರಿನಲ್ಲಿ ಏತ ನೀರಾವರಿ ಯೋಜನೆಗೆ ಒಳಪಡುವ ಎಲ್ಲಾ ಕೆರೆಗಳನ್ನು ತುಂಬಿಸಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚುವರಿ 1 ಟಿ.ಎಂ.ಸಿ ನೀರಿನ ಅವಶ್ಯಕತೆಯಿದ್ದು, ಹೆಚ್ಚುವರಿ 1 ಟಿ.ಎಂ.ಸಿ ನೀರನ್ನು ಹರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಕ್ಷೇತ್ರದ ಜನರಿಂದ ಲಂಚ ಪಡೆದಿರುವುದು ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳನ್ನು ಜನತಾದರ್ಶನ ಕಾರ್ಯಕ್ರಮದಲ್ಲಿ ಕರೆಸಿ ಜನರಿಂದ ಪಡೆದ ಲಂಚದ ಹಣವನ್ನುಅವರಿಗೆ ವಾಪಸ್ ವಿತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಹೆಬ್ಬೂರು ಹೋಬಳಿ ಅಧ್ಯಕ್ಷ ವೈ.ಟಿ. ನಾಗರಾಜು, ನಾರಾಯಣಪ್ಪ, ಪ್ರಕಾಶ್, ಶ್ರೀನಿವಾಸ್ ಹಾಗೂ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment