ರೌಡಿಶೀಟರ್ ಕೊಲೆ: ಆರೋಪಿಗೆ ಗುಂಡಿಕ್ಕಿ ಸೆರೆ

ತುಮಕೂರು, ನ. ೩- ಕುಡಿದ ಅಮಲಿನಲ್ಲಿ ರೌಡಿಶೀಟರ್‌ನನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಕಾಲಿಗೆ ಕ್ಯಾತ್ಸಂದ್ರ ಪೊಲೀಸರು ಎರಡು ಬಾರಿ ಗುಂಡಿಕ್ಕಿ ಬಂಧಿಸಿದ್ದಾರೆ.
ಟೆಂಪರ್ ರಾಜ ಎಂಬಾತನೇ ಬಂಧಿತ ಆರೋಪಿ. ಈತ ತನ್ನ ಸ್ನೇಹಿತ ಮೋಹನಕುಮಾರ ಅಲಿಯಾಸ್ ಮನು ಎಂಬಾತನೊಂದಿಗೆ ಕಂಠಪೂರ್ತಿ ಕುಡಿದು ಬೆಳಗುಂಬ ಬಸ್ ನಿಲ್ದಾಣದ ಬಳಿ ಜಗಳ ತೆಗೆದು ಆತನ ತಲೆಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದ ಕ್ಯಾತ್ಸಂದ್ರ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಮತ್ತು ಸಿಬ್ಬಂದಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರು.
ಈ ಕೊಲೆ ನಡೆದು 24 ಗಂಟೆಯೊಳಗೆ ಆರೋಪಿಯ ಸುಳಿವರಿತ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಅವರು ನಗರಕ್ಕೆ ಸಮೀಪವಿರುವ ವಡ್ಡರಹಳ್ಳಿ ಬಳಿ ಆರೋಪಿ ಟೆಂಪಲ್ ರಾಜನನ್ನು ಪತ್ತೆಹಚ್ಚಿ ಬಂಧಿಸಲು ಮುಂದಾದಾಗ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅವರ ಮೇಲೆಯೇ ಹಲ್ಲೆಗೆ ಮುಂದಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ತಕ್ಷಣ ಎಚ್ಚೆತ್ತ ಸಿಪಿಐ ಶ್ರೀಧರ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೆ ಆರೋಪಿ ಟೆಂಪಲ್ ರಾಜ ಪೊಲೀಸರ ಮಾತಿಗೆ ಕಿಮ್ಮತ್ತು ನೀಡದೆ ಸಿಪಿಐ ಶ್ರೀಧರ್ ಮತ್ತು ಪೇದೆ ರಮೇಶ್ ಎಂಬುವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.
ತಕ್ಷಣ ಸಿಪಿಐ ಶ್ರೀಧರ್ ಅವರು ಆರೋಪಿ ಕಾಲಿಗೆ ಎರಡು ಬಾರಿ ಗುಂಡು ಹಾರಿಸಿ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಪಿಐ ಶ್ರೀಧರ್ ಅವರ ಎಡಗೈಗೆ ಮತ್ತು ಪೇದೆ ರಮೇಶ್ ಅವರ ಬಲ ಭುಜಕ್ಕೆ ಗಾಯಗಳಾಗಿದ್ದು, ಇವರಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿ ಟೆಂಪರ್ ರಾಜನನ್ನು ಸಹ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment