ರೋಷನ್‌ಬೇಗ್ ರಾಜೀನಾಮೆ

ಬೆಂಗಳೂರು, ಜು. ೯- ಕಾಂಗ್ರೆಸ್‌ನ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದ್ದು, ಕಾಂಗ್ರೆಸ್ ಪಕ್ಷದಿಂದ ಅಮಾನತ್ತಾಗಿರುವ ಶಾಸಕ ರೋಷನ್‌ಬೇಗ್ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ರೋಷನ್ ಬೇಗ್ ರವರ ರಾಜೀನಾಮೆಯಿಂದ ದೋಸ್ತಿ ಪಕ್ಷಗಳ 14 ಶಾಸಕರು ಇದುವರೆಗೂ ರಾಜೀನಾಮೆ ನೀಡಿದಂತಾಗಿದೆ.
ಇಂದು ಮಧ್ಯಾಹ್ನ 12 ರ ಸುಮಾರಿಗೆ ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಸಭಾಧ್ಯಕ್ಷರ ಕಛೇರಿಗೆ ಆಗಮಿಸಿದ ಶಾಸಕ ರೋಷನ್‌ಬೇಗ್ ಸಭಾಧ್ಯಕ್ಷ ರಮೇಶ್‌ಕುಮಾರ್ ರವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ರೋಷನ್ ಬೇಗ್ ಕಾಂಗ್ರೆಸ್‌ನ ದುಸ್ಥಿತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಕಾರಣ ಎಂದು ಹೇಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರವರನ್ನು ಬಫೂನ್ ಎಂದು ಟೀಕಿಸಿದ್ದ ಬೆನ್ನಲ್ಲೆ ಅವರನ್ನ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಕಾಂಗ್ರೆಸ್ ಪಕ್ಷದ ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದ ರೋಷನ್ ಬೇಗ್ ರವರು ನಿನ್ನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅದರಂತೆ ಇಂದು ರೋಷನ್ ಬೇಗ್ ರವರು ಸಭಾಧ್ಯಕ್ಷರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಶಾಸಕ ರೋಷನ್ ಬೇಗ್ ರಾಜೀನಾಮೆ ಸಲ್ಲಿಸಿದ ಸಂದರ್ಭದಲ್ಲಿ ಸಭಾಧ್ಯಕ್ಷರ ಕೊಠಡಿಯಲ್ಲಿ ಕೆ.ಜೆ. ಜಾರ್ಜ್, ಕೃಷ್ಣಭೈರೇಗೌಡ ಇದ್ದರು. ರೋಷನ್ ಬೇಗ್ ಅವರ ಸಮ್ಮುಖದಲ್ಲೇ ರಾಜೀನಾಮೆ ನೀಡಿದ್ದು ವಿಶೇಷವಾಗಿತ್ತು.
ರಾಜೀನಾಮೆ ನೀಡದಂತೆ ರೋಷನ್ ಬೇಗ್ ರವರನ್ನು ಮನವೊಲಿಸುವ ಯತ್ನಗಳು ವಿಫಲವಾಗಿವೆ.
ರೋಷನ್ ಬೇಗ್ ಹೇಳಿಕೆ
ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸಭಾಧ್ಯಕ್ಷರಿಗೆ ನೇರವಾಗಿ ರಾಜೀನಾಮೆ ಪತ್ರ ನೀಡಿರುವುದಾಗಿ ರೋಷನ್ ಬೇಗ್ ರಾಜೀನಾಮೆ ಸಲ್ಲಿಕೆ ನಂತರ ಸುದ್ದಿಗಾರರಿಗೆ ತಿಳಿಸಿದರು.

Leave a Comment