ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಒತ್ತಾಯ

 

ಕಲಬುರಗಿ,ಜೂ.13- ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಘೋಷಣೆಯಾಗಿ ಅರ್ಧ ದಶಕ ಕಳೆದರೂ ಇನ್ನೂ ಕಾರ್ಯ ಆರಂಭವಾಗದಿರುವುದು ಈ ಭಾಗದ ಜನರಿಗೆ ನಿರಾಸೆಯುಂಟು ಮಾಡಿದೆ. ಕೂಡಲೇ ರೇಲ್ವೆ ವಿಭಾಗೀಯ ಕಚೇರಿ ಸ್ಥಾಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಆಗ್ರಹಿಸಿದರು.

ನಗರದ ಖಾಸಗಿ ಹೋಟೇಲ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಅಂಟಿಕೊಂಡಿರುವ ಬೀದರ್ ನಿಂದ ಆರಂಭವಾಗಿ ವಿಕರಾಬಾದ್, ಸೇಡಂ, ಚಿತ್ತಾಪೂರ, ವಾಡಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ ವಿಜಯಪುರ, ಸೊಲ್ಲಾಪುರ ಕಲಬುರಗಿಯಿಂದ ಪುನಃ ಬೀದರ್‍ಗೆ ಚಲಿಸುವಂತೆ ಒಂಬತ್ತು ಜಿಲ್ಲೆಗಳಿಗೆ ವರ್ತುಲಾಕಾರವಾಗಿ ಸಂಪರ್ಕ ಕಲ್ಪಿಸಿ ಈ ಭಾಗದ 2 ಕೋಟಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತ್ತಾಯಿಸಿದರು.

ಬೀದರ್- ಕಲಬುರಗಿ ಮುಖಾಂತರ ಪಶ್ಚಿಮ ಕರ್ನಾಟಕದ ಜಿಲ್ಲೆಗಳಿಗೆ ರೈಲು ಓಡಿಸಬೇಕು. ಕಲಬುರಗಿಯಿಂದ ಬೀದರ್ ಮಾರ್ಗವಾಗಿ ನವದೆಹಲಿಯವರೆಗೆ ಗರೀಭ ರಥದ ಮಾದರಿಯಲ್ಲಿ ಹೊಸ ರೈಲು ಓಡಿಸಲು ಕ್ರಮ ಕೈಗೊಳ್ಳಬೇಕು. ಕಲಬುರಗಿಯಿಂದಲೇ ಕಲಬುರಗಿ- ಬೆಂಗಳೂರು ಮತ್ತು ಕಲಬುರಗಿ- ಮುಂಬೈಗೆ ನೂತನ ರೈಲು ಆರಂಭಿಸಬೇಕು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬೀದರ್‍ನಿಂದ ರೇನಿಗುಂಟಾಕ್ಕೆ ಹೋಗಲು ರೈಲಿನ ವ್ಯವಸ್ಥೆ ಇಲ್ಲದ್ದರಿಂದ ಬೀದರ್, ಔರಂಗಾಬಾದ್ ಹಾಗೂ ಕಲಬುರಗಿ ಜನತೆಗೆ ಅನುಕೂಲವಾಗುವಂತೆ ಕಲಬುರಗಿ ಮಾರ್ಗವಾಗಿ ಔರಂಗಾಬಾದ್- ರೇನಿಗುಂಟಾಕ್ಕೆ ಹೊಸ ರೈಲು ಆರಂಭಿಸಬೇಕು ಎಂದು ಆಗ್ರಹಿಸಿದರು.

ಸೋಲ್ಲಾಪೂರ- ಗುಂತಕಲ್ ಪ್ಯಾಸಿಂಜರ್ ರೈಲು ಮೇಲ್ದರ್ಜೆಗೇರಿಸಬೇಕು. ಕಲಬುರಗಿ ಹುಬ್ಬಳ್ಳಿ ಮಧ್ಯೆ ಹೆಚ್ಚುವರಿ ರೈಲ್ವೆ  ಪ್ರಾರಂಭಿಸಬೇಕು. ಕೆಲವು ರೇಲ್ವೆಗಳ ಕೋಚ್ ಕಲಬುರಗಿಯಿಂದ ಸೊಲಾಪೂರಕ್ಕೆ ವರ್ಗಾವಣೆಯಾಗಿದ್ದು, ಕಲಬುರಗಿಯಲ್ಲೇ ಉಳಿಯುವಂತೆ ನೋಡಿಕೊಳ್ಳಬೇಕು. ಕಲಬುರಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದಿನಗಳೆದಂತೆ ಹೆಚ್ಚುತ್ತಿದ್ದು, ಇನ್ನೊಂದು ಎಕ್ಸಿಲರೇಟರ್ ಅಳವಡಿಸಬೇಕು ಎಂದು ಒತ್ತಾಯಿಸಿದರು.

ರೇಲ್ವೆಗಳಲ್ಲಿ ಕಳ್ಳತನ ದರೋಡೆಗಳು ಹೆಚ್ಚುತ್ತಿದ್ದು, ಕರ್ನಾಟಕ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕಲಬುರಗಿ ರೈಲು ನಿಲ್ದಾಣದಲ್ಲಿ ಒಂದು ಖಾಯಂ ರೈಲ್ವೆ ಪೊಲೀಸ್ ಠಾಣೆ ಸ್ಥಾಪಿಸಿ ಸಿಪಿಐ ದರ್ಜೆಯ ಅಧಿಕಾರಿಯನ್ನು ನೇಮಿಸಬೇಕು. ಅಲ್ಲದೇ, ಪ್ರಯಾಣಿಕರು ಕಲಬುರಗಿಯಲ್ಲಿಯೇ ದೂರು ನೀಡುವಂತೆ ಕ್ರಮ ಕೈಗೊಳ್ಳಬೇಕು. ಕಲಬುರಗಿ ಪೊಲೀಸ್ ವಸತಿ ಗೃಹಗಳು ಸಂಪೂರ್ಣ ಹಳೆಯದಾಗಿದ್ದು, ಕುಸಿಯುವ ಹಂತದಲ್ಲಿವೆ. ಕೂಡಲೇ ಗೃಹ ಇಲಾಖೆ ನೂತನ ವಸತಿ ಗೃಹಗಳನ್ನು ನಿರ್ಮಿಸಿ ಪೊಲೀಸ್‍ರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ಈ ಮೇಲಿನ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಎಲ್ಲಾ ಸಂಸದರ ಮನೆ ಮುಂದೆ ಹಂತ- ಹಂತವಾಗಿ ಹೋರಾಟ ಮಾಡಲಾಗುವುದು ಹಾಗೂ ಸೊಲಾಪೂರ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Leave a Comment