ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪಟ್ಟು

ಕಾಮಗಾರಿ ವಿಳಂಬವಾದರೆ ದಾವಣಗೆರೆ ಬಂದ್ ಎಚ್ಚರಿಕೆ
ದಾವಣಗೆರೆ, ಮಾ.20- ಅಶೋಕ ರಸ್ತೆ ಬಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲೇ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ರೈಲ್ವೆ ಗೇಟ್ ಬಳಿ ಸಂಚಾರ ಬಂದ್ ಗೊಳಿಸಿ ಪ್ರತಿಭಟನೆ ನಡೆಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ನಾಲ್ಕು ವರ್ಷಗಳ ಹಿಂದೆಯೇ ಕಾಮಗಾರಿಗೆ 35 ಕೋಟಿ ರೂ ಗಳನ್ನು ಮಂಜೂರು ಮಾಡುವಲ್ಲಿ ಯಶಸ್ವಿಯಾಗಿದ್ದರು.ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಹಿಸಿಲ್ಲ. ಈ ಬಗ್ಗೆ ಸಂಸದರು ಹಲವಾರು ಬಾರಿ ಸೂಚನೆ ನೀಡಿದ್ದರು ಸಹ ಯಾವುದೇ ಪ್ರತಿಕ್ರಿಯೆ ಬಾರದಿರುವುದು ವಿಷಾಧಕರ. ಸಾರ್ವಜನಿಕರ ಹಿತದೃಷ್ಟಿಯಿಂದ ಮೇಲ್ಸೇತುವೆ ನಿರ್ಮಿಸುವುದು ಅಗತ್ಯವಾಗಿದೆ. ಕೇವಲ ರಾಜಕೀಯಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸದಿರುವುದು ದುರದೃಷ್ಟಕರ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತ್ ರಾವ್ ಜಾದವ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು ಸಹ ಜಿಲ್ಲಾಧಿಕಾರಿ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಹಾಗೂ ದಾವಣಗೆರೆ ಬಂದ್ ಮಾಡಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು. ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಬೇಕೆಂದು ಪ್ರತಿಭಟನಾ ನಿರತರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಪ್ರತಿಭಟನಾನಿರತರೊಂದಿಗೆ ಮಾತನಾಡಿ, ಮೇಲ್ಸೇತುವೆ ಕಾಮಗಾರಿ ನಿರ್ಮಾಣ ಕುರಿತಂತೆ ಕಳೆದ ಮಾ, 17 ರಂದೇ ಸಭೆ ನಡೆಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿದೆ.ತಾಂತ್ರಿಕ ದೋಷದಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿದೆ.ಅದನ್ನು ಪರಿಗಣಿಸಲಾಗುವುದು. ಈ ವಾರದೊಳಗೆ ರೈಲ್ವೆ ಪಿಡಬ್ಲ್ಯೂಡಿ ಇಂಜಿನಿಯರ್ ಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಧರಣಿಯಲ್ಲಿ ಹೆಚ್.ಎನ್.ಶಿವಕುಮಾರ್, ಕೊಂಡಜ್ಜಿ ಜಯಪ್ರಕಾಶ್, ಆನಂದ್ ರಾವ್, ರಾಜನಹಳ್ಳಿ ಶಿವಕುಮಾರ್, ರಾಜಶೇಖರ್, ಪಾಲಿಕೆ ಸದಸ್ಯ ಡಿ.ಕುಮಾರ್, ಸಂಕೋಳ್ ಚಂದ್ರಶೇಖರ್, ಶ್ರೀನಿವಾಸ್, ಸಹನಾರವಿ, ಬಿ.ಟಿ.ಸಿದ್ದಪ್ಪ, ಶಿವಕುಮಾರ್, ತರಕಾರಿ ಶಿವು, ನಾಗರಾಜ್, ಎಲ್,ಡಿ.ಗೋಣೆಪ್ಪ, ಪಿ.ಸಿ.ಶ್ರೀನಿವಾಸ್, ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

Leave a Comment