ರೈತ, ಯೋಧರಷ್ಟೇ ದೇಶಕ್ಕೆ ನೇಕಾರರು ಮುಖ್ಯ : ಪಾಟೀಲ

ಕಲಬುರಗಿ,ಆ.7-ಅನ್ನ ಕೊಡುವ ರೈತ, ಗಡಿ ಕಾಯುವ ಯೋಧರಷ್ಟೇ ದೇಶಕ್ಕೆ ನೇಕಾರರು ಮುಖ್ಯವಾಗಿದ್ದಾರೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

ಹಟಗಾರ ಸಮಾಜ ಅಭಿವೃದ್ಧಿ ಸಂಘ ಹಾಗೂ ಚೌಡೇಶ್ವರಿ ಸೌಹಾರ್ದ ಸಹಕಾರ ನಿಯಮಿತದ ಸಂಯುಕ್ತಾಶ್ರಯದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ನೇಕಾರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಶರಣರು ಕಾಯಕವೇ ಕೈಲಾಸವೆಂದರು. ಕಾಯಕಕ್ಕೆ ಬೆನ್ನೆಲುಬಾಗಿ ನಿಂತವರು ನೇಕಾರರು. ನೇಕಾರರ ಬದುಕು ಕಷ್ಟದಲ್ಲಿದ್ದರೂ ಅವರು ಇನ್ನೊಬ್ಬರ ಬದುಕಿಗೆ ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ರೈತರು, ಯೋಧರಷ್ಟೇ ನೇಕಾರರು ದೇಶಕ್ಕೆ ಮುಖ್ಯ ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ನೇಕಾರರ ದಿನಾಚರಣೆಯನ್ನು ಘೋಷಣೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಕೈಯಿಂದ ನೇಯ್ದ ಬಟ್ಟೆಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ನೇಕಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಪ್ರಧಾನಮಂತ್ರಿಗಳು ರಾಷ್ಟ್ರೀಯ ನೇಕಾರರ ದಿನ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಎಸ್.ಎಂ.ಹಿರೇಮಠ ಅವರು ಮಾತನಾಡಿ, ಕಾಯಕ ಅತ್ಯಂತ ಪವಿತ್ರವಾದ ಶಬ್ಧ. ನೇಕಾರಿಕೆ ಅಕ್ಷರಶ: ಕಾಯಕ, ಮನುಷ್ಯನ ನಾಗರೀಕತೆ, ಸಂಸ್ಕೃತಿಯ ಉದಯದೊಂದಿಗೆ ನೇಕಾರಿಗೆ ಹುಟ್ಟಿದೆ. ಹರಪ, ಮೆಹೆಂಜೋದಾರೋ ಸಂಸ್ಕೃತಿಗಿಂತಲೂ ಹಿಂದಿನಿಂದಲೂ, ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ನೇಕಾರಿಕೆ ಇತ್ತು ಎಂದು ಹೇಳಿದರು.

ಹಟಗಾರ ಸಮಾಜದ ಮುಖಂಡ ಚನ್ನಮಲ್ಲಪ್ಪ ನಿಂಬೇಣಿ ಅವರು ಕೈಮಗ್ಗ ಸ್ಥಿತಿಗತಿಯ ಕುರಿತು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯುತ್ ಚಾಲಿತ ಮಗ್ಗಗಳು ಇರಲಿಲ್ಲ. ಕೈಮಗ್ಗಳಿದ್ದವು. ವಿದ್ಯುತ್ ಚಾಲಿತ ಮಗ್ಗಗಳು ಬಂದಿದ್ದರಿಂದಾಗಿ ಕೈಮಗ್ಗ ಕೆಲಸಗಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದರು.

ಮಹಿಳಾ ಸೌಹಾರ್ದ ಪತ್ತಿನ ಸಹಕಾರ ನಿಯಮಿತದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ತಪಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಪುತ್ರಪ್ಪಾ ಭಾವಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎಸ್.ಮಾಲಿಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಪತ್ರಕರ್ತ ಸಂಗಮನಾಥ ರೇವತಗಾಂವ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಕುಮಾರ ಗೌರ ಕಾರ್ಯಕ್ರಮ ನಿರೂಪಿಸಿದರು. ಕ್ಷೀರಲಿಂಗ ರೂಗಿ ವಂದಿಸಿದರು.

ಹಟಗಾರ ಸಮಾಜ ಅಭಿವೃದ್ಧಿ ಸಂಘ ಹಾಗೂ ಚೌಡೇಶ್ವರಿ ಸೌಹಾರ್ದ ನಿಯಮಿತದ ಸದಸ್ಯರು ಮತ್ತು ಹಟಗಾರ ಸಮಾಜ ಬಾಂಧವರು ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

Leave a Comment