ರೈತ ಮಾರುಕಟ್ಟೆ : ಅನ್ಯ ವ್ಯಾಪಾರಿಗಳು ಬೇಡ

ರಾಯಚೂರು.ಜು.17- ಉಸ್ಮಾನಿಯ ತರಕಾರಿ ಮಾರುಕಟ್ಟೆ ಹಿಂಭಾಗದಲ್ಲಿರುವ ರೈತ ಮಾರುಕಟ್ಟೆಯಲ್ಲಿ ರೈತರನ್ನು ಹೊರತು ಪಡಿಸಿ, ಅನ್ಯ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸದಿರುವಂತೆ ಇಂದು ಒತ್ತಾಯಿಸಲಾಯಿತು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ನಗರಸಭೆಗೆ ಭೇಟಿ ನೀಡಿದ ರೈತರು ಮತ್ತು ಬೆಂಬಲಿಗರ ವ್ಯಾಪಾರಸ್ಥರು 1991 ರಲ್ಲಿ ರೈತರಿಗಾಗಿಯೇ ಈ ಮಾರುಕಟ್ಟೆ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ತರಕಾರಿ ಇಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಆದರೆ, ಕೆಲ ವ್ಯಾಪಾರಿಗಳು ರೈತ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಇದು ಸರಿಯಾದ ಕ್ರಮವಲ್ಲ. ಕಾರಣ ತಕ್ಷಣವೇ ಇದನ್ನು ಸ್ಥಗಿತಗೊಳಿಸಲು ಆಯುಕ್ತ ಮಲ್ಲಿಕಾರ್ಜುನ ಗೋಪಿಶೆಟ್ಟಿ ರವರಿಗೆ ಒತ್ತಾಯಿಸಲಾಯಿತು.
ತರಕಾರಿ ಮಾರುಕಟ್ಟೆಯಲ್ಲಿ ಸಣ್ಣ ಪುಟ್ಟ ದುರಸ್ತಿ ಕಾಮಗಾರಿ ಕೈಗೊಂಡಿದ್ದರಿಂದ ಎರಡು ತಿಂಗಳ ಮಟ್ಟಿಗೆ ವ್ಯಾಪಾರಿಗಳು ರೈತ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಲಿದ್ದಾರೆಂದು ಆಯುಕ್ತರು ಸಮಾಜಾಯಿಸಿ ಹೇಳಿದರು. ಇದಕ್ಕೆ ಪಾಪಾರೆಡ್ಡಿ ಅವರು ಪ್ರತಿಕ್ರಿಯಿಸಿ, ಎರಡು ತಿಂಗಳ ಮಟ್ಟಿಗೆ ಮಾತ್ರ ಇತರೆ ವ್ಯಾಪಾರಿಗಳು ಇಲ್ಲಿ ತರಕಾರಿ ಮಾರಾಟ ನಡೆಸುತ್ತಾರೆಂದು ಲಿಖಿತ ನಡಾವಳಿ ರೂಪದಲ್ಲಿ ನೀಡುವಂತೆ ಆಗ್ರಹಿಸಿದರು.
ನಗರಸಭೆ ಲಿಖಿತವಾಗಿ ಭರವಸೆ ನೀಡಿದರೇ ಮಾತ್ರ, ಇತರರಿಗೆ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲದಿದ್ದರೇ, ರೈತರಿಗೆ ಮಾತ್ರ ಈ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಲಿದ್ದಾರೆಂದು ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾವೀರ, ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment