ರೈತ ದಸರಾಗೆ ಅರ್ಥಪೂರ್ಣ ಮುನ್ನುಡಿ

ಎತ್ತಿನ ಗಾಡಿ ಓಡಿಸಿ ಚಾಲನೆ ಕೊಟ್ಟ ಕೃಷಿ ಸಚಿವ
ಮೈಸೂರು, ಅ.12- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮೂರನೇ ದಿನಕ್ಕೆ ಕಾಲಿಟ್ಟಿದ್ದು ದಸರಾ ಅಂಗವಾಗಿ ಇಂದು ಮೈಸೂರಿನಲ್ಲಿ ಆಯೋಜಿಸಿದ್ದ ರೈತ ದಸರಾದ ರಂಗು ಕಳೆಗಟ್ಟಿತ್ತು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಿದ್ದ ರೈತ ದಸರಾವನ್ನು ಕೃಷಿ ಸಚಿವ ಶಿವಶಂಕರ ರೆಡ್ಡಿ ನಂದಿ ಕಂಬಕ್ಕೆ ಪುಷ್ಪಾರ್ಚನೆ ಮಾಡಿ, ನಾಗರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ನಂತರ ಎತ್ತಿನ ಗಾಡಿ ಓಡಿಸುವ ಮೂಲಕ ಕೃಷಿ ಸಚಿವ ಶಿವಶಂಕರ್ ರೆಡ್ಡಿ ರೈತ ದಸರಾ ಮೆರವಣಿಗೆಗೆ ಅರ್ಥಪೂರ್ಣ ಚಾಲನೆ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಪ್ರತಿ ಬಾರಿ ದಸರಾದಲ್ಲಿ ರೈತ ದಸರಾ ಮಾಡುತ್ತಿದ್ದೇವೆ. ರೈತ ದಸರಾ ಮೂಲಕ ರೈತರ ಜೀವನ ರೂಪಿಸುವ ಕೆಲಸ ಮಾಡ್ತಿದ್ದೇವೆ.
ಸರ್ಕಾರದಿಂದ ಈಗಾಗಲೇ ಕೃಷಿಯಲ್ಲಿ ಹೊಸ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ ಎಂದರು.
ಕೃಷಿ ವಸ್ತು ಪ್ರದರ್ಶನದ ಮೂಲಕ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ತಿಳಿಸುವ ಕೆಲಸ ಮಾಡುತ್ತೇವೆ. ಇಸ್ರೇಲ್ ಮಾದರಿ ಕೃಷಿಗೆ ಸರ್ಕಾರದಿಂದ ಒತ್ತು ನೀಡಲಾಗಿದೆ. ಅಲ್ಲದೆ, ರೈತರಿಗೆ ಶೂನ್ಯ ಬಂಡವಾಳದಲ್ಲಿ ಸಾಲ ಸೌಲಭ್ಯ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಸಾಲಮನ್ನಾ ವಿಚಾರದಲ್ಲಿ ನವೆಂಬರ್ 2 ನೇ ವಾರದಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸಾಲದ ಹಣ ತುಂಬಿಸಲಾಗುವುದು ಎಂದರು.
ಮಣ್ಣು ಮತ್ತು ನೀರು ಸಂರಕ್ಷಣಾ ಕಾರ್ಯಕ್ರಮ, ಕೃಷಿ ಭಾಗ್ಯ-ರೈತರ ಬಾಳಿಗೆ ಸೌಭಾಗ್ಯ, ಕ್ಷೀರಧಾರೆ, ಹಸಿರು ಕರ್ನಾಟಕ ಆಂದೋಲನ ನಮ್ಮ ನಡೆ ಹಸಿರು ಕರ್ನಾಟಕದ ಕಡೆ, ರೇಷ್ಮೆ ಇಲಾಖೆ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಜೊತೆಗೆ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಕೋಲಾಟ, ಹುಲಿ ವೇಷ, ವೀರಗಾಸೆ, ಯಕ್ಷಗಾನ, ದೇವರ ಕುಣಿತ, ಪೂಜಾ ಕುಣಿತ, ಕೀಲು ಕುದುರೆ ಕುಣಿತ, ಬಂಡೂರು ಕುರಿ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು.

Leave a Comment