ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರ ಮುಂದಾಗಬೇಕು

ಪಿರಿಯಾಪಟ್ಟಣ: ಫೆ.20- ತಂಬಾಕು ಬೆಳೆಯ ಬೆಲೆ ಮಾರುಕಟ್ಟೆಯಲ್ಲಿ ದಿನೇ ದಿನೇ ಕುಸಿತ ಕಾಣುತ್ತಿರುವುದರಿಂದ ರೈತರು ಆರ್ಥಿಕವಾಗಿ ಕಂಗಾಲಾಗಿದ್ದು ರೈತರಿಗೆ ನ್ಯಾಯ ದೊರಕಿಸಿಕೊಡಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ತಾಲೂಕಿನ ತಂಬಾಕು ಬೆಳೆಯುವ ರೈತ ಮುಖಂಡರುಗಳು ಆಗ್ರಹಿಸಿದರು.
ರಾಷ್ಟ್ರದಲ್ಲಿಯೇ ಉತ್ತಮ ಗುಣಮಟ್ಟದ ತಂಬಾಕಿಗೆ ಪಿರಿಯಾಪಟ್ಟಣ ತಾಲೂಕು ಹೆಸರುವಾಸಿಯಾಗಿದ್ದರು ಇದರ ಲಾಭ ಬೆಳೆಗಾರರಿಗೆ ತಲುಪುತ್ತಿಲ್ಲ, ತಂಬಾಕು ಬೆಳೆಗೆ ಪರ್ಯಾಯ ಬೆಳೆಯ ಮಾರ್ಗೋಪಾಯ ಕಲ್ಪಿಸಿಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಂಬಾಕು ಬೆಳೆಯುವ ರೈತ ಮುಖಂಡರುಗಳು ಆರೋಪಿಸಿದರು.
ತಂಬಾಕು ಉದ್ಯಮದ ಮೇಲಿನ ತೆರಿಗೆಯ ಪರಿಣಾಮ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಆದಾಯ ತಟಸ್ಥ ದರಗಳಿಗೆ ತಗ್ಗಿಸಲು ಮತ್ತು ತಂಬಾಕು ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ, ಮೈಸೂರು ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಹೆಚ್ಚಿನ ರೈತರು ತಂಬಾಕು ಬೆಳೆಯನ್ನೇ ಅವಲಂಬಿಸಿ ಉತ್ತಮ ಗುಣಮಟ್ಟದ ವರ್ಜಿನಿಯಾ ತಂಬಾಕು ಬೆಳೆಯುತ್ತಿದ್ದರೂ ಸಹ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಂದರ್ಭ ರೈತರಿಗೆ ಕಡಿಮೆ ದರ ಸಿಗುತ್ತಿರುವುದರಿಂದ ಅನ್ಯಾಯವಾಗುತ್ತಿದೆ, ಎಲ್ಲ ಉತ್ಪನ್ನಗಳ ಮೇಲೆ ತೆರಿಗೆ ಆದಾಯ ತಟಸ್ಥವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ ಸಹ ತಂಬಾಕು ಉದ್ಯಮದ ವಿಷಯದಲ್ಲಿ ತೆರಿಗೆ ಹೆಚ್ಚಾಗಿದೆ, ಇದರಿಂದ ಕಳ್ಳ ಸಾಗಣೆ ಮಾಡುವ ತಂಬಾಕು ಉತ್ಪನ್ನಗಳಿಗೆ ಉತ್ತೇಜನ ನೀಡಿದಂತಾಗಿದೆ, ಭಾರತದಲ್ಲಿ ವಿದೇಶಿ ತಂಬಾಕು ಉತ್ಪನ್ನಗಳ ವ್ಯಾಪಾರ ಕಳೆದ ಕೆಲ ವರ್ಷಗಳಲ್ಲಿ ಮಹತ್ತರವಾಗಿ ಬೆಳೆದಿದ್ದರೂ ಸಹ ಸರ್ಕಾರ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ, ಕಡಿಮೆ ದರದ ವಿದೇಶಿ ತಂಬಾಕು ಉತ್ಪನ್ನಗಳಿಂದ ನಮ್ಮ ದೇಶದ ತಂಬಾಕು ಉತ್ಪನ್ನಗಳ ಬೇಡಿಕೆ ಕುಸಿತದಿಂದಾಗಿ ರೈತರು ತೀವ್ರ ಒತ್ತಡದಲ್ಲಿದ್ದು ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತಂಬಾಕು ಬೆಳೆಗಾರರ ಹಿತ ಕಾಯಬೇಕಿದೆ ಎಂದು ತಂಬಾಕು ಬೆಳೆಗಾರರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಂಬಾಕು ಬೆಳೆಯುವ ರೈತ ಮುಖಂಡರುಗಳಾದ ಎಚ್.ಜಿ ಪರಮೇಶ್, ಶ್ರೀನಿವಾಸ್, ಕೃಷ್ಣೇಗೌಡ, ಮುತ್ತುರಾಜ್, ಕೋಡಿಗೌಡ ಹಾಜರಿದ್ದರು.

Leave a Comment