ರೈತರ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಲು ಸಚಿವರಿಗೆ ಮನವಿ

ಮೈಸೂರು. ಜೂ.20: ಮೈಸೂರು ಜಿಲ್ಲೆಯ ಪ್ರವಾಸದಲ್ಲಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರನ್ನು ಭೇಟಿಯಾಗಲು ಬಂದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಮುಖರು ರೈತರ ಸಮಸ್ಯೆಗಳ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಕಂದಾಯ ಸಚಿವರನ್ನು ಭೇಟಿ ಮಾಡಲು ಬಂದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಜಿ.ಪಂ ಎದುರಿಂದು ಪ್ರತಿಭಟನೆ ನಡೆಸಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಗೊಂದಲ ನಿವಾರಿಸಿ, ರೈತರಿಗೆ ಕಿರುಕುಳ ತಪ್ಪಿಸಿ, ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಹೊಸ ಸಾಲ ಕೊಡಿವಂತೆ ಆಗಬೇಕು. ರೈತರ ಖಾತೆಗೆ ಬರುವ ಕಬ್ಬಿನ ಹಣ/ಸಹಾಯಧನ ಸಾಲಕ್ಕೆ ಜಮಾ ಮಾಡಿಕೊಳ್ಳುವುದು ನಿಲ್ಲಬೇಕು. ತಾಲೂಕು ಕಛೇರಿಗಳಲ್ಲಿ ರೈತರಿಗೆ ಖಾತೆ ಮಾಡಲು ವಿಳಂಬ ನೀತಿ ಅನುಸರಿಸುವುದು, ವರಮಾನ/ಜಾತಿ ಪ್ರಮಾಣ ಪತ್ರ ಪಡೆಯಲು ದಲ್ಲಾಳಿಗಳ ಮೂಲಕ ಲಂಚ ಕೇಳುವುದು ತಪ್ಪಿಸಬೇಕು ಎಂದರು. ಕಾಡಂಚಿನ ಪ್ರಾಣಿಗಳ ಹಾವಳಿಗೆ ತಡೆ ಹಾಕಬೇಕು. ಬೆಳೆ ಹಾನಿ ನಷ್ಟಪರಿಹಾರ ವೈಜ್ಞಾನಿಕವಾಗಿ ಸಿಗುವಂತಾಗಬೇಕು. ಕಾಡಂಚಿನ ವ್ಯವಸಾಯ ಭೂಮಿ ಅಕ್ರಮ-ಸಕ್ರಮ ಕಾರ್ಯ ಕೈಗೆತ್ತಿಕೊಳ್ಳಬೇಕು. ರಾಜ್ಯಾದ್ಯಂತ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೊಳವೆ ಬಾವಿ ಬೆಳೆ ನಷ್ಟವನ್ನು ಬರ ಪರಿಹಾರ ಕಾರ್ಯಕ್ರಮದಲ್ಲಿ ತುಂಬಿಕೊಡಬೇಕು. ತಾಲೂಕು ಕಛೇರಿಗಳಲ್ಲಿ ಪೌತಿ ಖಾತೆ ಮಾಡಲು ಸರ್ವೆ ಸ್ಕೆಚ್ಚು ಹಾಗೂ ಪೋಡಿ ಮಾಡಲು ಕಿರುಕುಳ ನೀಡುತ್ತಿದ್ದು ಸರಿಪಡಿಸಲು ಕ್ರಮ ಮಕೈಗೊಳ್ಳಬೇಕು. ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಯೋಜನೆ ತಿದ್ದುಪಡಿ ಮಾಡಿ ಎಲ್ಲಾ ಬೆಳೆಗಳಿಗೂ, ಎಲ್ಲಾ ಪ್ರದೇಶಕ್ಕೂ ಅನ್ಮಯವಾಗುವಂತೆ ಜಾರಿ ಮಾಡಬೇಕು. ಗ್ರೀನ್ ಬಡ್ಸ್ ಆಗ್ರೋ ಫಾರ್ಮ್ಸ್ ಲಿ.ಕಂಪನಿಯಿಂದ ವಂಚನೆಗೊಳಗಾದ ಠೇವಣಿದಾರರಿಗೆ ಹಣ ವಾಪಸ್ ಕೊಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭ ಅತ್ತಹಳ್ಳಿ ದೇವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Leave a Comment