ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ರೈತ ಸಂಘ ಒತ್ತಾಯ

ಬಳ್ಳಾರಿ, ಜ.25:ಬೆಳೆ ಬೆಳೆಯಲು ರೈತರು ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಎಲ್ಲಾ ರೀತಿಯ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕವು ಒತ್ತಾಯಿಸಿದೆ.

ಬರಪೀಡಿತವಾಗಿರುವ ಬಳ್ಳಾರಿ ಜಿಲ್ಲೆಯ ರೈತರು ಬೆಳೆ ಅಲ್ಪಸ್ವಲ್ಪ ಬೆಳೆಯನ್ನು ಖರೀದಿಸುವವರು ಇಲ್ಲದೇ ರೈತರು ಬದುಕನ್ನು ಸಾಗಿಸಲು ತತ್ತರಿಸುವಂತಹ ಪರಿಸ್ಥಿತಿಯನ್ನು ಎದುರುಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ರೈತರ ಸಹಾಯಕ್ಕೆ ಧಾವಿಸಿ ರೈತರು ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಎಲ್ಲಾರೀತಿಯ ಬೆಳೆ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಹಾಗೂ ಮಳೆಯಾಶ್ರಿತ ಹಾಗೂ ನೀರಾವರಿ ಭೂಮಿಯಲ್ಲಿ ಬೆಳೆ ಬೆಳೆದು ನಷ್ಟಕ್ಕೊಳಗಾದ ರೈತರಿಗೆ ತಕ್ಷಣ ಬೆಳೆ ನಷ್ಟ ಪರಿಹಾರವನ್ನು ವಿತರಿಸಬೇಕು, ಹಾಗೂ ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳ ನದಿ ಜೋಡಣೆ ಮಾಡಿ ತನ್ಮೂಲಕ ಆಲಮಟ್ಟಿಯಿಂದ ಆಂಧ್ರ ಪ್ರದೇಶಕ್ಕೆ ವ್ಯರ್ಥವಾಗಿ ಅರಿದು ಹೋಗುತ್ತಿರುವ ಹೆಚ್ಚುವರಿ ನೀರನ್ನು ತುಂಗಭದ್ರಾ ಜಲಾಶಯದಲ್ಲಿ ಶೇಖರಿಸಿ ಬಳ್ಳಾರಿ ಜಿಲ್ಲೆಯೂ ಸೇರಿದಂತೆ ಕೊಪ್ಪಳ, ರಾಯಚೂರು ರೈತರಿಗೆ ಎರಡೂ ಬೆಳೆ ಬೆಳೆಯಲು ಸರಬರಾಜು ಮಾಡಬೇಕೆಂದು ಸಂಘವು ಒತ್ತಾಯಿಸಿದೆಯಲ್ಲದೇ, ರೈತರಿಂದ ಬ್ಯಾಂಕ್ ಗಳಲ್ಲಿ ಕಟ್ಟಿಸಿಕೊಂಡಿರುವ ಬೆಳೆ ವಿಮೆ ಹಣವನ್ನು ವಿಮೆಯ ಸಂಪೂರ್ಣ ಮೊತ್ತದೊಂದಿಗೆ ನಷ್ಟವಾಗಿರುವ ರೈತರಿಗೆ ತಪ್ಪದೇ ಅತೀ ಶೀಘ್ರದಲ್ಲಿ ಸಂದಾಯ (ಪಾವತಿಸಬೇಕು) ಮಾಡಬೇಕೆಂದು ರೈತ ಸಂಘವು ಒತ್ತಾಯಿಸಿದೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಜಿಲ್ಲೆಯ ಸಿರುಗುಪ್ಪ ನಗರಕ್ಕೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಸಿರು ಶಾಲು ಹೊದಿಸುವುದರೊಂದಿಗೆ ಗೌರವಿಸಿ, ಸವಿವರವಾದ ಮನವಿ ಪತ್ರ ಸಲ್ಲಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಜಿ.ಪುರುಷೋತ್ತಮ ದರೂರು ಮತ್ತಿತರರು ಬಳ್ಳಾರಿ ಜಿಲ್ಲೆಯಾದ್ಯಂತ ಕೈಗಾರಿಕೆಗಳ ಸ್ಥಾಪನೆಗಾಗಿ ಅತೀ ಕಡಿಮೆ ಬೆಲೆಯಲ್ಲಿ ವಶಪಡಿಸಿಕೊಂಡಿರುವ ಕೃಷಿ ಯೋಗ್ಯ ಸಾವಿರಾರು ಎಕರೆ ಜಮೀನುಗಳಲ್ಲಿ ಅತೀ ಶೀಘ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ, ಜಮೀನುಗಳಲ್ಲಿ ನೀಡಿದ ಪ್ರತಿ ರೈತ ಕುಟಂಬದ ಮಕ್ಕಳಿಗೆ ನೇರವಾಗಿ ಉದ್ಯೋಗಗಳನ್ನು ನೀಡಬೇಕು ಎಂದು ಒತ್ತಾಯಿಸಿರುವ ಅವರು, ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ವಿಳಂಬವಾದಲ್ಲಿ ಸದರಿ ಜಮೀನುಗಳನ್ನು ಆಯಾ ರೈತರಿಗೆ ವಾಪಸ್ಸು ನೀಡಿ, ಕೃಷಿ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರಲ್ಲದೆ, 2015ರ ಸೆಪ್ಟೆಂಬರ್ ನಲ್ಲಿ ತೀವ್ರ ಅತೀವೃಷ್ಠಿಯಿಂದ ಬೆಳೆ ನಷ್ಟವಾಗಿರುವ ಜಿಲ್ಲೆಯ ಸಮಸ್ತ ರೈತರಿಗೆ ಪರಿಹಾರವಾಗಿ 13 ಕೋಟಿ ರೂಗಳನ್ನು ತಕ್ಷಣ ಮಂಜೂರು ಮಾಡಬೇಕೆಂದು ಹಾಗೂ ತಮ್ಮ ನ್ಯಾಯಯುತವಾದ ಇತರೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಎಂ.ಎಲ್.ಕೆ.ನಾಯ್ಡು, ಗೋಣಿ ಬಸಪ್ಪ, ಬಂಗ್ಲೆ ಮಲ್ಲಿಕಾರ್ಜುನ, ಪುರುಷೋತ್ತಮ ದರೂರು, ಕಷ್ಣಪ್ಪ, ಶರಣನಗೌಡ, ಗಂಗಾವತಿ ವೀರೇಶ್, ವೀರನಗೌಡ, ಜಾಲಿಹಾಳ್ ಶ್ರೀಧರ್ ಗೌಡ ಮತ್ತಿತರರು ಇದ್ದರು.

Leave a Comment