ರೈತರ ಮೊಗದಲ್ಲಿ ಸಂತಸ ತಂದ ಮಳೆರಾಯ

ಹುಳಿಯಾರು, ಸೆ. ೧೩- ಹೋಬಳಿಯ ಹಲವು ಭಾಗಗಳಲ್ಲಿ ಮಳೆ ಹದವಾಗಿ ಸುರಿದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ಮುಂಗಾರು ಕೈ ಕೊಟ್ಟು ಬಿತ್ತಿದ್ದ ಹೆಸರು, ಅಲಸಂದೆ ನೆಲಕಚ್ಚಿ ದನಕರುಗಳಿಗೆ ಮೇವು ಸಹ ಸಿಗದೆ ರೈತ ಕಂಗಾಲಾಗಿದ್ದ. ಇತ್ತ ಅಂತರ್ಜಲ ಬತ್ತಿ ಕೊಳವೆ ಬಾವಿಗಳಲ್ಲಿ ನೀರು ಇಲ್ಲದಾಗಿ ಅಡಿಕೆ, ತೆಂಗು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದರು.

ಹಿಂಗಾರು ಮಳೆಯನ್ನು ನಂಬಿ ದಿನ ದೂಡುತ್ತಿದ್ದ ರೈತನಿಗೆ ಕಳೆದೊಂದು ವಾರದಿಂದ ಮೋಡ ಸಹ ಆಟವಾಡಿಸುತ್ತಿತ್ತು. ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ವಿವಿಧ ಕಡೆ ಮಳೆಯಾಗಿದ್ದರೂ ಹುಳಿಯಾರು ಹೋಬಳಿಯಲ್ಲಿ ಹನಿ ಮಳೆಯಾಗದೆ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.
ಅಂತೂ ಶನಿವಾರ ಹಾಗೂ ಭಾನುವಾರ ಉತ್ತಮ ಮಳೆಯಾಗಿದ್ದು ರಾಗಿ, ಅವರೆ, ತೊಗರಿ, ಮುಂತಾದ ಬೆಳೆಗಳು ನಳನಳಿಸುವಂತೆ ಮಾಡಿದೆ. ಜತೆಗೆ ತೆಂಗು, ಅಡಿಕೆ ತೋಟಗಳಲ್ಲಿ ಅಲ್ಲಲ್ಲಿ ಮಳೆಯ ನೀರು ಸಂಗ್ರಹವಾಗಿದೆ. ದಸೂಡಿ ಹಾಗೂ ಹೊಯ್ಸಳಕಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲುವಂತಾಗಿದೆ.

ಪಟ್ಟಣದ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿ ಜನರು ಪರದಾಡುವಂತೆ ಮಾಡಿತು. ಇಲ್ಲಿನ ಹೊಸದುರ್ಗ ರಸ್ತೆಯ ಕೇಶವಾಪುರ ರಸ್ತೆಯಲ್ಲಿ ಮೊಳಕಾಲುದ್ದ ಗುಂಡಿ ಬಿದ್ದಿದ್ದು, ಅಲ್ಲಿ ಮಳೆಯ ನೀರು ನಿಂತು ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ಕಿರಿಕಿರಿ ತಂದೊಡ್ಡಿತ್ತು.

Leave a Comment