ರೈತರ ಬೇಡಿಕೆಗೆ ರೈತ ಸಂಘ ಒತ್ತಾಯ

ಕಲಬುರಗಿ,ಸೆ.9. ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿರುವುದರಿಂದ ತಕ್ಷಣ ಜಾನುವಾರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ

ಇನ್ನಿತರ ರೈತರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಹೈದ್ರಾಬಾದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಸಿ. ಪಾಟೀಲ್ ಇಂದಿಲ್ಲಿ ಒತ್ತಾಯಿಸಿದರು.

ನಗರದ ಪತ್ರಿಕಾಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಬಾರದ್ದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮುಂಗಾರು ಬೆಳೆಗಳಾದ ಉದ್ದು, ಹೆಸರು, ಸೂರ್ಯಕಾಂತಿ,ಎಳ್ಳು ಬೆಳೆಗಳು ಬಾರದಿದ್ದರಿಂದ ರೈತ

ದಿಕ್ಕುತೋಚದೆ ಕಂಗಾಲಾಗಿ ಕುಳಿತಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಹಾಗೂ ಈ ಭಾಗದ ಮಂತ್ರಿಗಳು, ಶಾಸಕರು ರೈತರ ಬಗ್ಗೆ  ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುತ್ತಿಲ್ಲವೆಂದು  ಆರೋಪಿಸಿದರು.

ಹಲವಾರು ಸಮಸ್ಯೆಗಳಿಂದ ಈಗಾಗಲೇ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾನುವಾರುಗಳು ನೀರು,

ಮೇವಿಲ್ಲದೇ ಕಂಗಾಲಾಗಿವೆ. ಕಾಟಾಚಾರಕ್ಕೆಂಬಂತೆ ಈಗಾಗಲೇ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ ಎಂದು ದೂರಿದ ಅವರು, ಕೂಡಲೇ ರಾಜ್ಯದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈ.ಕ. ಭಾಗವನ್ನು ಕೇಂದ್ರವನ್ನಾಗಿ ಮಾಡಿಕೊಂಡು ರೈತರನ್ನೊಳಗೊಂಡ ಸಭೆ ಕರೆಯಬೇಕು. ಬಾಕಿ ಇರುವ ಕಬ್ಬಿನ ಹಣ ತಕ್ಷಣ ಬಿಡುಗಡೆಗೊಳಿಸಬೇಕು. ವೈಮಾನಿಕ ಸಮೀಕ್ಷೆ ಪ್ರಾಮಾಣಿಕವಾಗಿ ನಡೆಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ಭಾರತಿ ಬಾಯಿ ಜೀವಣಗಿ, ಜಿಲ್ಲಾಧ್ಯಕ್ಷ ದೇವಾನಂದ ಕೋರಳ್ಳಿ, ಶಾಂತಪ್ಪಾ ನರೋಣಾ ಮತ್ತಿತರರು ಹಾಜರಿದ್ದರು..

Leave a Comment