ರೈತರ ದೀರ್ಘಾವಧಿ ಸಾಲವನ್ನು ಮನ್ನಾ ಮಾಡಲು ಆಗ್ರಹ

ಬಳ್ಳಾರಿ, ಜು.17:ರಾಜ್ಯ ಸರ್ಕಾರವು ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಅಲ್ಪಾವಧಿ ಸಾಲವನ್ನು ಮಾತ್ರ ಮನ್ನಾ ಮಾಡಿದ್ದು, ದೀರ್ಘಾವಧಿ ಸಾಲವನ್ನು ಕೂಡಾ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಒತ್ತಾಯಿಸಿದೆ.

ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಕಾರ್ತಿಕ್, ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ, ಕರೂರು ಮತ್ತು ಇತರರು ಇಂದು ಪೂರ್ವಾಹ್ನ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಹಾಗೂ ರೈತ ಸಂಘಗಳ ನಿರಂತರ ಹೋರಾಟದಿಂದಾಗಿ ರಾಜ್ಯ ಸರ್ಕಾರವು ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಅಲ್ಪಾವಧಿ ಸಾಲವನ್ನು ಮನ್ನಾ ಮಾಡಿದೆ. 8,165 ಕೋಟಿ ರೂಗಳ ಸಾಲ ಮನ್ನಾ ಮಾಡಿದ್ದರೂ 14 ಷರತ್ತುಗಳನ್ನು ವಿಧಿಸಿರುವುದು ಸರಿಯಲ್ಲ. ಈ ಷರತ್ತುಗಳಿಂದಾಗಿ ಲಕ್ಷಾಂತರ ಜನ ರೈತರು ‘ಸಾಲ’ ಮನ್ನಾದಿಂದ ವಂಚಿತರಾಗಲಿದ್ದಾರೆ. ಆದುದರಿಂದ ಯಾವುದೇ ಷರತ್ತುಗಳನ್ನು ವಿಧಿಸದೇ ರೈತರ ಸಾಲ ಮನ್ನಾ ಮಾಡಬೇಕು. ಅಂತೆಯೇ ದೀರ್ಘಾವಧಿ ಸಾಲ 2.571 ರೋಟಿ ರೂಗಳನ್ನು ಕೂಡಾ ಮಾಫಿ ಮಾಡಬೇಕು ಎಂದರು.

ಕೇಂದ್ರ ಸರ್ಕಾರವು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳಿಂದ ರೈತರು ಪಡೆದ ಕೃಷಿ ಸಾಲವನ್ನು ಮನ್ನಾ ಮಾಡಬೇಕು, ರಾಜ್ಯ ಸರ್ಕಾರವು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು, ಅಂತೆಯೇ ರಾಜ್ಯ ಸರ್ಕಾರವು ರೈತರ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಬೇಕು. ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ರೈತರ ಸಂಕಷ್ಟ-ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವಂತೆ ಕೋರಬೇಕು ವಸ್ತುಸ್ಥಿತಿಯನ್ನು ಕೇಂದ್ರಕ್ಕೆ ಮನದಟ್ಟು ಮಾಡಿಕೊಡಬೇಕು ಎಂದರು.

 ಕೇಂದ್ರ, ರಾಜ್ಯ ಸರ್ಕಾರಗಳು ವಿಫಲ
ಕೇಂದ್ರದಲ್ಲಿನ ಬಿಜೆಪಿ ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಗಳು ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಕೈಗಾರಿಕೋದ್ಯಮಿಗಳ 6.10 ಲಕ್ಷ ಕೋಟಿ ರೂಪಾಯಿಗಳ ಸಾಲಮನ್ನಾ ಮಾಡಿ ರಿಯಾಯಿತಿ ನೀಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗದಿರುವುದು ನಿಜಕ್ಕೂ ಶೋಚನೀಯ ಎಂದು ಜೆ.ಕಾರ್ತಿಕ್, ಮಾಧವರೆಡ್ಡಿ ಟೀಕಿಸಿದರು.

 ರೈತರ ಹೋರಾಟದಿಂದ ಸಾಲಮನ್ನಾ
ರಾಜ್ಯ ಸರ್ಕಾರವು ರೈತರು ಸಹಕಾರ ಸಂಘಗಳಲ್ಲಿ ಪಡೆದ ಅಲ್ಪಾವಧಿ ಸಾಲವನ್ನು ಮನ್ನಾ ಮಾಡಿರುವುದು ರೈತರು ಮತ್ತು ರೈತ ಸಂಘದ ನಿರಂತರ ಹೋರಾಟದಿಂದಾಗಿಯೇ ಹೊರತು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೀಡಿದ ಎಚ್ಚರಿಕೆಯಿಂದಲ್ಲ, ಯಡಿಯೂರಪ್ಪ ನವರಿಗೆ ರಾಜ್ಯದ ರೈತರ ಬಗ್ಗೆ ನಿಜವಾದ ಕಳಕಳಿ-ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಮನವೊಲಿಸಿ ರೈತರು ಬ್ಯಾಂಕ್ ಗಳಿಂದ ಪಡೆದ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹ ಪಡಿಸಿದರು.

25ಸಾವಿರ ರೂ.ನಿಗದಿಮಾಡಿ
ರಾಜ್ಯದಲ್ಲಿನ ರೈತರು ಬೆಳೆದಂತಹ ಮೆಣಸಿನಕಾಯಿ ಬೆಳೆದ ಬೆಲೆ ಕುಸಿದಿದ್ದು, ಪ್ರತಿ ಕ್ವಿಂಟಾಲಿಗೆ 25ಸಾವಿರ ರೂಗಳನ್ನು ನಿಗದಿ ಪಡೆಸಬೇಕು ಹಾಗೂ ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ರೈತರಿಗೆ ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ನ್ಯಾಯೋಚಿತ ಪರಿಹಾರ ನೀಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ ಎಂದರು.

ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಯಾವುದೇ ಕಾರಣಗಳಿಗೂ ಕಾರ್ಖಾನೆಗಳಿಗೆ ಬಿಡಬಾರದು ಎಂದು ಕಾರ್ತೀಕ್, ಮಾಧವರೆಡ್ಡಿ ಆಗ್ರಹಿಸಿದರು.ಕೇಂದ್ರ ಸರ್ಕಾರವು ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಪಡೆದ ಕೃಷಿ ಸಾಲ ಮನ್ನಾ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಧುರೀಣರುಗಳಾದ ಟಿ.ವೆಂಕಟೇಶ್, ಗಾಳಿ ವಿಶ್ವನಾಥ್, ಕೆ.ವೀರಾರೆಡ್ಡಿ, ಅಶೋಕ್, ಬಿ.ದೇವರೆಡ್ಡಿ, ಬಿ.ವಿ.ಗೌಡ, ಹೆಚ್.ಎಸ್.ರೇವಣ ಸಿದ್ದಯ್ಯ, ಕೊಟ್ರಪ್ಪ, ಎಂ.ಗಾದಿಲಿಂಗಪ್ಪ ಮತ್ತು ಇತರರು ಉಪಸ್ಥಿತರಿದ್ದರು.

Leave a Comment