ರೈತರ ಅಭಿವೃದ್ಧಿಗೆ ಜಾನುವಾರುಗಳು ಪೂರಕ

ಕೆ.ಆರ್.ಪೇಟೆ, ಡಿ.6- ಜಾನುವಾರುಗಳ ಆರೋಗ್ಯದಲ್ಲಿ ರೈತರ ಅಭಿವೃದ್ಧಿ ಅಡಗಿದೆ ಹಾಗಾಗಿ ಕಾಲ ಕಾಲಕ್ಕೆ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸುವ ಮೂಲಕ ಅವುಗಳ ಆರೋಗ್ಯವನ್ನು ಕಾಪಾಡುವ ಮೂಲಕ ರೈತನ ಅಭಿವೃದ್ದಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ತಾಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜ್ ಹೇಳಿದರು.
ಅವರು ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಪಶುವೈದ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಜಾನುವಾರು ತಪಾಸಣೆ ಶಿಬಿರ ಮತ್ತು ಉಚಿತ ಔಷಧ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಅಭಿವೃದ್ದಿಗೆ ಜಾನುವಾರುಗಳು ಅಗತ್ಯವಾಗಿವೆ. ಬೇಸಾಯಕ್ಕೆ ಯಾಂತ್ರೀಕರಣದ ನಡುವೆಯು ಹೆಚ್ಚು ರೈತರು ಜಾನುವಾರುಗಳ ಮೂಲಕ ಬೇಸಾಯ ಮಾಡುತ್ತಿದ್ದಾರೆ. ಜೊತೆಗೆ ಹೈನುಗಾರಿಕೆಯಲ್ಲಿ ರೈತರಿಗೆ ನಿರ್ಧಿಷ್ಠ ಲಾಭ ತಂದು ಕೊಡುತ್ತಿರುವ ಜಾನುವಾರುಗಳಿಗೆ ಬರುವ ರೋಗಗಳಿಗೆ ಹಾಗಾಗ್ಗೆ ಲಸಿಕೆಗಳನ್ನು ಹಾಕಿಸುವ ಮೂಲಕ ಮೂಕ ಪ್ರಾಣಿಗಳ ಆರೋಗ್ಯದ ಬಗ್ಗೆ ರೈತರು ಹೆಚ್ಚು ಕಾಳಜಿ ವಹಿಸಬೇಕು. ಮನುಷ್ಯರಾದರೆ ಆರೋಗ್ಯ ಸರಿಯಿಲ್ಲ ಎಂದು ಬಾಯಿಬಿಟ್ಟು ಹೇಳುತ್ತಾರೆ ಆದರೆ ಮೂಕಪ್ರಾಣಿಗಳು ಅನಾರೋಗ್ಯ ಉಂಟಾದಾಗ ವೇದನೆ ಕರಳು ಹಿಂಡುವಂತಿರುತ್ತದೆ ಆದ್ದರಿಂದ ರೈತರು ತಮ್ಮ ಎಲ್ಲಾ ಜಾನುವಾರುಳಿಗೆ ಹಾಗೂ ಸಾಕು ಪ್ರಾಣಿಗಳಾದ ಕುರಿ, ಕೋಳಿ, ಮೇಕೆ, ನಾಯಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುವ ಮೂಲಕ ರೈತನ ಮಿತ್ರನಂತೆ ಕೆಲಸ ಮಾಡಲು ಅವುಗಳಿಗೆ ಅವಕಾಶ ನೀಡಬೇಕಾಗಿದೆ. ಜಾನುವಾರುಗಳಿಗೆ ಸರಕಾರವೇ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆ ಜಾರಿಗೊಳಿಸಿದೆ ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ.ದೇವರಾಜು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಸದಸ್ಯರಾದ ಕಾಂತಾಮಣಿ, ಮಂಜುನಾಥ್, ಎನ್.ಎಸ್.ಎಸ್. ಅಧಿಕಾರಿ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವೇಗೌಡ, ಜಯಶಂಕರ್, ಪ್ರಭಾವತಿ, ಕುಮಾರ್, ಕೆ.ವಿ.ಗುರುವಯ್ಯ, ಮುಖಂಡರಾದ ಪ್ರಸಾದ್, ಸುರೇಶ್, ಗ್ರಾಮದ ಮುಖಂಡರಾದ ಪಟೇಲ್ ಶಿವಕುಮಾರ್, ಗುರುವಯ್ಯ, ಸೋಮಶೇಖರ್, ಕುಮಾರ್, ಮಂಜು, ಮೋಹನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 800ಕ್ಕೂ ಹೆಚ್ಚು ಅಧಿಕ ಜಾನುವಾರುಗಳಿಗೆ ಹಾಗೂ ಸಾಕು ಪ್ರಾಣಿಗಳಿಗೆ ತಪಾಸಣೆ ನಡೆಸಿ ಉಚಿತ ಔಷಧಿಯನ್ನು ವಿತರಣೆ ಮಾಡಲಾಯಿತು.

Leave a Comment