ರೈತರ ಅನುಕೂಲಕ್ಕಾಗಿ ಶ್ರಮಿಸಲು ಕರೆ

ಬ್ಯಾಡಗಿ,ಆ9: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಗ್ರಾಮಾಭಿವೃದ್ಧಿಗೆ ಹೆಚ್ಚು ವರದಾನವಾಗಿದ್ದು, ಈ ಯೋಜನೆಯಡಿ ಹೆಸರು ನೊಂದಾಯಿಸಿಕೊಂಡ ಕೂಲಿಕಾರ್ಮಿಕರು ಕಾಮಗಾರಿಗಳಲ್ಲಿ ತೊಡಗಿ ಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಡತೆಯನ್ನು ಹೊಂದುವುದರೊಂದಿಗೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಬಹುದಾಗಿದೆ ಎಂದು ತಾಲೂಕಾ ಸಾಮಾಜಿಕ ಲೆಕ್ಕ ಪರಿಶೋಧನಾ ತಾಲೂಕಾ ಸಂಯೋಜಕ ಬಸವರಾಜ ಅಮಾತಿ ಹೇಳಿದರು.

 
ಅವರು ತಾಲೂಕಿನ ಕಾಗಿನೆಲೆ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಜರುಗಿದ 2017-18ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಅನುಕೂಲವಿರುವ ಬದು ನಿರ್ಮಾಣ, ನೀರು ಕಾಲುವೆಗಳ ನಿರ್ಮಾಣಕ್ಕೆ ರೈತರಿಂದ ಹೆಚ್ಚು ಬೇಡಿಕೆಗಳಿದ್ದು, ಈ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ರೈತರಿಗೆ ಉಪಯೋಗವಾಗುವಂತೆ ಕ್ರಮ ವಹಿಸಬೇಕೆಂದು ಹೇಳಿದರು.

 
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಾರದಾ ಕುದರಿ ಮಾತನಾಡಿ ಜನರ ಬೇಡಿಕೆಗಳ ಅನುಗುಣವಾಗಿ ಕಾಮಗಾರಿಗಳನ್ನು ನಡೆಸಲು ಸಿದ್ದರಿದ್ದು, ಕೈಕೊಂಡ ಕಾಮಗಾರಿಗಳು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಕೈಗೊಂಡರೇ ಉತ್ತಮವೆಂದರು. ಕಳೆದ 6 ತಿಂಗಳಲ್ಲಿ 86 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅದಕ್ಕಾಗಿ 11 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ಮುಂದುವರೆದಿವೆ ಎಂದರು.

 

 
ಸಭೆಯ ಅಧ್ಯಕ್ಷತೆಯನ್ನು ಬಿಸಿಎಂ ಇಲಾಖೆಯ ಬಿ.ಎಸ್.ಬೇಗೂರ ವಹಿಸಿದ್ದರು. ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಹಯ್ಯಾದ್‍ಬಿ ಮತ್ತಿಹಳ್ಳಿ, ತಾ.ಪಂ.ಸದಸ್ಯ ಜಗದೀಶ ಪುಜಾರ, ಗ್ರಾ.ಪಂ.ಸದಸ್ಯರಾದ ನಸ್ರಿನಾಬಾನು ತಿಳವಳ್ಳಿ, ಅಲ್ಲಾಭಕ್ಷ ಬಳ್ಳಾರಿ, ಗ್ರಾಮಸ್ಥರಾದ ಇಸಾಕ್‍ಅಹ್ಮದ ಮತ್ತಿಹಳ್ಳಿ, ಶಿವಲಿಂಗಯ್ಯ ಹೊಂಡದಮಠ, ವೆಂಕಟೇಶ ಕಟ್ಟಿಮನಿ, ಮುಸ್ತಾಕ ಅಹ್ಮದ ಯಲಿಗಾರ, ಮಹ್ಮದಗೌಸ್ ಅಮಿನಭಾವಿ, ಎನ್‍ಆರ್‍ಜಿ ಇಂಜನೀಯರ ಸಚೀನಕುಮಾರ ಕೋಣಸಾಲಿ, ರೇಶ್ಮೆ ಇಲಾಖೆಯ ವಿಸ್ತರಣಾಧಿಕಾರಿ ಕೆ.ಎಚ್.ಪೂಜಾರ, ತೋಟಗಾರಿಕೆ ಇಲಾಖೆಯ ಕೃಷಿ ಅಧಿಕಾರಿ ಅಶೋಕ ಕೊಪ್ಪದ, ಲೆಕ್ಕ ಪರಿಶೋಧನಾ ತಂಡದ ನಾಗರಾಜ್ ತೆವರಿ, ಗುಡ್ಡಪ್ಪ ಪ್ಯಾಟಿ ಹಾಗೂ ಇನ್ನಿತರರು ಇದ್ದರು.

Leave a Comment