ರೈತರಿಗೆ ಸಿಗದ ಪರಿಹಾರ: ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ಮಧುಗಿರಿ, ಆ. ೯- ಇತ್ತೀಚೆಗೆ ಬಿದ್ದ ಮಳೆ ಹಾಗೂ ತೀವ್ರ ತರದ ಗಾಳಿಯಿಂದಾಗಿ ಸಿರಾ ತಾಲೂಕಿನಲ್ಲಿ ಅಡಿಕೆ, ತೆಂಗು, ಮಾವು ಇತ್ಯಾದಿ ಮರಗಳು ಸಂಪೂರ್ಣ ನಾಶವಾಗಿದ್ದು, ಈ ಮರಗಳಿಗೆ ವಯಸ್ಸನ್ನಾಧರಿಸಿ ಪರಿಹಾರ ನೀಡುವ ಬಗ್ಗೆ ಹಾಗೂ ಈ ವಿಷಯದ ಬಗ್ಗೆ ಕ್ರಮ ಕೈಗೊಂಡಿರದ ಸಿರಾ ತಹಶೀಲ್ದಾರರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕದ ಪದಾಧಿಕಾರಿಗಳು, ಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಿರಾ ತಾಲ್ಲೂಕಿನಲ್ಲಿ ಸುಮಾರು 27ಸಾವಿರ ಅಡಿಕೆ ಮರಗಳು, 11 ಸಾವಿರ ತೆಂಗಿನ ಮರಗಳು ಹಾಗೂ ಸಾವಿರಕ್ಕೂ ಹೆಚ್ಚು ಮಾವಿನ ಮರಗಳು ಪ್ರಕೃತಿ ವಿಕೋಪದಿಂದ ನೆಲಕ್ಕುರುಳಿದ್ದು, ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದ್ದಾರೆ. ಪ್ರಕೃತಿ ವಿಕೋಪದಡಿಯಲ್ಲಿ ಮರಗಳಿಗೆ ಅವುಗಳ ವಯಸ್ಸನ್ನಾಧರಿಸಿ ಪರಿಹಾರ ನೀಡಬೇಕೆಂದು ಸಿರಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡ ಇದುವರೆಗೂ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲರಾಗಿರುವ ಸಿರಾ ತಹಶೀಲ್ದಾರ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

8 ದಿನಗಳೊಳಗಾಗಿ ಪರಿಹಾರ ವಿತರಣೆ ಮಾಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ರಾಜಣ್ಣ, ಲಿಂಗೇಗೌಡ, ಸುರೇಶ್, ಪಾಲನೇತ್ರ, ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment