ರೈತರಿಗೆ ಸಮಗ್ರ ಮಾಹಿತಿ ನೀಡಿ – ಖಾಸೀಂ ನಾಯಕ

ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ
ರಾಯಚೂರು.ನ.21- ರೈತರು ಬೆಳೆದ ಬೆಳೆಗಳ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡುವ ಕೆಲಸ ಮಾಡಬೇಕೆಂದು ಜಿಲ್ಲಾ ಪಂಚಾಯತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಖಾಸೀಂ ನಾಯಕ ಅವರು ಹೇಳಿದರು.
ಅವರಿಂದು ನಗರದ ಕೃಷಿ ಇಲಾಖೆ ಕಛೇರಿಯಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರೈತರು ಬೆಳೆದ ಬೆಳೆಗಳಿಗೆ ರೋಗ ಹರಡುತ್ತಿದ್ದು, ಪತ್ತೆ ಹಚ್ಚಿ ಔಷಧಿ ಮಾಹಿತಿ ನೀಡುವ ಮೂಲಕ ರೈತರ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳು ಮಾಹಿತಿ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಮುಂದಾಗಬೇಕು.
ಬೆಳೆ ಪರಿಹಾರ, ಬೆಳೆ ವಿಮೆ ಪ್ರತಿಯೊಬ್ಬ ರೈತರಿಗೂ ತಲುಪಿದೆ. ಇದು ಒಳ್ಳೆಯ ವಿಚಾರವಾಗಿದ್ದು, ರೈತರಿಗೆ 5 ಸಾವಿರದಿಂದ 1 ಲಕ್ಷದವರೆಗೂ ಬೆಳೆ ವಿಮೆ ದೊರೆತಿದ್ದು, ಹಿಂಗಾರು ಮುಂಗಾರು ಬೆಳೆ ಬೆಳೆಯಲು ಕೃಷಿ ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ಕರೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಾಹೀಂ ಹುಸೇನ್ ಮಾತನಾಡಿ, ಪ್ರತಿಯೊಂದು ಹಳ್ಳಿಗಳಿಗೆ ತೆರಳಿ, ಕೃಷಿ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ಕೃಷಿ ಸಮಗ್ರ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ರೈತರಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿ, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ಡಾ.ಆರ್.ಜಿ.ಸಂದೀಪ್, ನಾಗಲಕ್ಷ್ಮೀ ನಾಗನಗೌಡ, ತಿಮ್ಮಪ್ಪ, ನರಸರೆಡ್ಡಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment