ರೈತರಿಗೂ ಪಿಂಚಣಿ ಭಾಗ್ಯ: 60 ವಯಸ್ಸು ದಾಟಿದವರಿಗೆ ಪ್ರತಿ ತಿಂಗಳು 3 ಸಾವಿರ ರೂ. ಕೇಂದ್ರದ ಕೊಡುಗೆ

ರಾಂಚಿ, ಸೆ. ೧೨- ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ನೀಡುವ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೆ ಪ್ರಧಾನಿ ನರೇಂದ್ರಮೋದಿ ಅವರು, 60 ವರ್ಷ ದಾಟಿದ ರೈತರಿಗೆ ಪ್ರತಿ ತಿಂಗಳು 3 ಸಾವಿರ ಪಿಂಚಣಿ ನೀಡುವ `ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್’ ಯೋಜನೆಗೆ ಇಂದು ಚಾಲನೆ ನೀಡಿದರು. ಈ ಮೂಲಕ ರೈತರಿಗೆ ಮತ್ತೊಮ್ಮೆ ಬಂಪರ್ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಭದ್ರತೆ ನೀಡುವ ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಮಾಸಿಕ ಪಿಂಚಣಿ ಯೋಜನೆ ದೇಶದ 5 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಇದಕ್ಕಾಗಿ ಮುಂದಿನ 3 ವರ್ಷಗಳಲ್ಲಿ 10,774 ಕೋಟಿ ರೂ. ತೆಗೆದಿಡಲು ನಿರ್ಧರಿಸಿದ್ದಾರೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆಯಡಿ 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ 18 ರಿಂದ 40 ವರ್ಷದೊಳಗಿನ ರೈತರು, 60 ವರ್ಷ ದಾಟಿದ ಬಳಿಕ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ಇದಾಗಿದೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು, ಜಾರ್ಖಂಡ್, ಒಡಿಸಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 400ಕ್ಕೂ ಹೆಚ್ಚು ಏಕಲವ್ಯ ಮಾದರಿ ವಸತಿ ಶಾಲೆಗಳ ಆರಂಭಕ್ಕೂ ಚಾಲನೆ ನೀಡಿದ್ದು, ಪರಿಶಿಷ್ಟ ಪಂಗಡ, ಬುಡಕಟ್ಟು,ಸಮುದಾಯದ ಮಕ್ಕಳು ಹೆಚ್ಚಿರುವ ಕಡೆ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ತೆರೆಯುವ ಯೋಜನೆ ಇದಾಗಿದ್ದು, ಮುಂದಿನ 2 ತಿಂಗಳಲ್ಲಿ ಶಾಲೆಗಳ ನಿರ್ಮಾಣಕ್ಕಾಗಿ 10 ಸಾವಿರ ಕೋಟಿ ಖರ್ಚು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಉದ್ಘಾಟನೆ
ಜಾರ್ಖಂಡ್‌ನ ವಿಧಾನಸಭೆಯ ನೂತನ ಕಟ್ಟಡವನ್ನು ಇದೇ ವೇಳೆ ಪ್ರಧಾನಿ ನರೇಂದ್ರಮೋದಿ ಉದ್ಘಾಟಿಸಿದರು. ಈ ವೇಳೆ ಮುಖ್ಯಮಂತ್ರಿ ರಘುಬರ್‌ದಾಸ್, ಕೇಂದ್ರ ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದರು.

ಈ ವರ್ಷಾಂತ್ಯಕ್ಕೆ ಜಾರ್ಖಂಡ್ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌ಗೆ ಬರಪೂರ ಯೋಜನೆಗಳನ್ನು ಪ್ರಧಾನಿ ನರೇಂದ್ರಮೋದಿ ಘೋಷಿಸಿದ್ದಾರೆ.
ಗಂಗಾನದಿಯ ಒಳನಾಡಿನ ಜಲಮಾರ್ಗ ಪ್ರಾಧಿಕಾರ 290 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾಹಿಬ್ ಗಂಜ್ 2ನೇ ಮಲ್ಟಿಮೋಡ್ ಟರ್ಮಿನಲ್‌ಗೂ ಅವರು ಚಾಲನೆ ನೀಡಿದರು.

ಜಾರ್ಖಂಡ್ ವಿಧಾನಸಭೆ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಮಲ್ಟಿಮೋಡ್ ಟರ್ಮಿನಲ್‌ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದ್ದು, ರಾಜ್‌ಮಹಲ್ ಪ್ರದೇಶದ ಸ್ಥಳೀಯ ಗಣಿಗಳಿಂದ ವಿವಿಧ ಉಷ್ಣವಿದ್ಯುತ್ ಸ್ಥಾವರಗಳಿಗೆ ದೇಶೀಯ ಕಲ್ಲಿದ್ದಲನ್ನು ಸಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಇದೇ ವೇಳೆ ದೇಶಾದ್ಯಂತ 462 ಏಕಲವ್ಯ ಮಾದರಿ ವಸತಿ ಶಾಲೆಗೂ ಪ್ರಧಾನಿ ಚಾಲನೆ ನೀಡಿದರು.

Leave a Comment